ಹುಣಸೂರು: ಹುಣಸೂರಿನಿಂದ ಕೋಟೆ ಕಡೆ ಹೋಗುವ ರಸ್ತೆಯಲ್ಲಿ ಡಾಂಬರೀಕರಣ ಮಾಡಲಾಗುತ್ತಿದ್ದು ಸಂಪೂರ್ಣ ಕಳಪೆಯಿಂದ ಕೂಡಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.
ಹುಣಸೂರಿನಿಂದ ಕೋಟೆಗೆ ಹೋಗುವ ಸುಮಾರು ಒಂದೂವರೆ ಕಿಲೋಮೀಟರ್ ರಸ್ತೆಗೆ ಡಾಂಬರೀಕರಣ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಭಾನುವಾರ ಕಾಮಗಾರಿಗಳನ್ನು ಮಾಡುವುದಿಲ್ಲ, ಆದರೂ ಕೆಲಸ ನಡೆಯುತ್ತಿದೆ ಇದನ್ನು ಪ್ರಶ್ನಿಸಿದರೆ ಸರಿಯಾದ ಉತ್ತರವನ್ನು ಯಾರು ನೀಡುತ್ತಿಲ್ಲ ಇದನ್ನು ಶಾಸಕರಾಗಲಿ, ಅಧಿಕಾರಿಗಳಾಗಲಿ ಗಮನಿಸಬೇಕಲ್ಲವೆ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಸರ್ಕಾರದ ದುಡ್ಡು ಹೀಗೆ ಪೋಲಾಗುತ್ತಿದೆ, ಕಳಪೆ ಕಾಮಗಾರಿ ಮಾಡಿ ಹಣ ಮಾಡುವ ಸಂಚು ಇದು, ಇದರಲ್ಲಿ ಯಾರು ಶಾಮೀಲಾಗಿದ್ದಾರೋ ತಿಳಿಯದು ಈ ಬಗ್ಗೆ ತನಿಖೆ ನಡೆಯಲೇಬೇಕು ಎಂದು ಚೆಲುವರಾಜು ಆಗ್ರಹಿಸಿದ್ದಾರೆ.
ನಾಳೆ ನಾನು ಈ ಕುರಿತು ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ತನಿಖೆ ಮಾಡುವಂತೆ ಒತ್ತಾಯಿಸುತ್ತೇನೆ ಎಂದು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ಚೆಲುವರಾಜು ತಿಳಿಸಿದ್ದು, ಉತ್ತಮ ಗುಣಮಟ್ಟದ ರಸ್ತೆ ಮಾಡಬೇಕು ಇಲ್ಲದಿದ್ದರೆ ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
