ಮೈಸೂರು: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶ್ರದ್ಧೆಯಿಂದ ಉನ್ನತ ಶಿಕ್ಷಣ ಪಡೆದು ದೊಡ್ಡ ಮಟ್ಟದ ಸಾಧನೆ ಮಾಡುವತ್ತ ಗಮನ ಹರಿಸಬೇಕು ಎಂದು ಐಎಎಸ್ ಇನ್ಸೈಟ್ಸ್ ನಿರ್ದೇಶಕ ಜಿ.ಬಿ.ವಿನಯ್ ಕುಮಾರ್ ಸಲಹೆ ನೀಡಿದ್ದಾರೆ.
ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಕನಕ ಸಮುದಾಯ ಭವನದಲ್ಲಿ ಕನಕಶ್ರೀ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ತೇರ್ಗಡೆ ಹೊಂದಿದ ಕುರುಬ, ಹಾಲುಮತ, ಕಾಡು ಕುರುಬ, ಜೇನು ಕುರುಬ ಸಮುದಾಯದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವತ್ತ ಗಮನ ಹರಿಸಬೇಕು. ಪೋಷಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಪಣ ತೊಡಬೇಕು. ಶಿಕ್ಷಣ ಪಡೆಯುವ ಸಂದರ್ಭದಲ್ಲಿಯೇ ವಿದ್ಯಾರ್ಥಿಗಳು ದೊಡ್ಡ ಮಟ್ಟದ ಸಾಧನೆಯ ಗುರಿ ಇಟ್ಟುಕೊಳ್ಳಬೇಕು ಇದರಿಂದ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣುವುದಿಲ್ಲ. ಈ ಕಾರಣಕ್ಕಾಗಿ ದೊಡ್ಡ ಸಾಧನೆ ತೋರಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದ ವಿನಯ್ ಕುಮಾರ್, ಸಣ್ಣದೊಂದು ಹುದ್ದೆ ಸಿಕ್ಕರೆ ಅದರಲ್ಲಿಯೇ ನಾವು ಸಂತೃಪ್ತಿಯನ್ನು ಕಾಣಲು ಬಯಸುತ್ತೇವೆ ಎಂದು ಹೇಳಿದರು.
ಕಾನೂನು ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗುವ ಕನಸು ಕಾಣಬೇಕು. ಅದೇ ರೀತಿ ಹಿಂದುಳಿದ ವರ್ಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಹೇಳಿದರು.
ದೊಡ್ಡ ಕನಸುಗಳನ್ನು ಕಾಣುವ ವಿಚಾರದಲ್ಲೂ ನಾವು ಭಯ ಪಡುತ್ತೇವೆ. ಈ ಭಯದಿಂದ ನಮ್ಮ ಆಯ್ಕೆಗಳು ಕಡಿಮೆಯಾಗುತ್ತವೆ. ವಿದ್ಯಾರ್ಥಿಗಳು ಮೊದಲು ಕಂಫರ್ಟ್ ಜೋನ್ನಿಂದ ಹೊರ ಬಂದು ದೊಡ್ಡ ಸಾಧನೆಯ ಕಡೆ ಗಮನಹರಿಸಬೇಕು ಎಂದು ತಿಳಿಸಿದರು.
ಕೆಲವರು ಶಿಕ್ಷಕರ ಹುದ್ದೆ ಪಡೆಯುವುದನ್ನೇ ದೊಡ್ಡ ಸಾಧನೆ ಅಂದುಕೊಂಡು ಅದರಲ್ಲಿಯೇ ಸಂತೃಪ್ತಿ ಪಡುತ್ತಾರೆ. ಅದಕ್ಕೂ ಮೀರಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಪ್ರಯತ್ನ ಮಾಡಬೇಕು ಎಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಮಣ್ಯ, ಕನಕಶ್ರೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಟಿ.ಬಿ.ಬಳಗಾವಿ, ಕಾರ್ಯದರ್ಶಿ ಪಿ.ಎನ್. ಕೃಷ್ಣಮೂರ್ತಿ, ಖಜಾಂಚಿ ಎಂ. ಪ್ರಕಾಶ್ ಟ್ರಸ್ಟಿಗಳಾದ ಮುನಿಚೌಡಪ್ಪ, ಕೆ. ಜಯರಾಮು, ಎಂ. ಮಹದೇವ, ಸಿ. ಬಸವರಾಜು, ಪಿ. ರಂಗಧಾಮಯ್ಯ, ರಾಜು ಆರ್, ಎಚ್.ಆರ್. ಸಂಗಮದ್, ಕಮಲಾ ಅನಂತರಾಮ್ ಮತ್ತಿತರರು ಉಪಸ್ಥಿತರಿದ್ದರು.
