ಪೃಥ್ವಿ ಅಂಬಾರ್, ಸಾಯಿ ಕುಮಾರ್ ಸುಧಾರಾಣಿ, ಶ್ವೇತಾ ವಿನೋಧಿನಿ ಮತ್ತಿತರರು ನಟಿಸಿರುವ ಚೌಕಿದಾರ್ ಸಿನಿಮಾ ರಿಲೀಸ್ ಆಗಿ ಅಭಿಮಾನಿಗಳ ಮೆಚ್ಚುಗೆ ಗಳಿಸ್ತಾ ಇದೆ.
ಈ ಸಿನಿಮಾದಲ್ಲಿ ತಂದೆ-ಮಗನ ಬಾಂಧವ್ಯದ ಕಥೆ ಇದೆ.ರಥಾವರ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಡಾ. ಕಲ್ಲಹಳ್ಳಿ ಚಂದ್ರಶೇಖರ ಈ ಚೌಕಿದಾರ್ ಸಿನಿಮಾವನ್ನು ನಿರ್ಮಿಸಿದ್ದಾರೆ.ಕುಟುಂಬದ ಎಲ್ಲರೂ ಕುಳಿತು ನೋಡಿ ಇಷ್ಟಪಡುವ ರೀತಿಯಲ್ಲಿ ‘ಚೌಕಿದಾರ್’ ಸಿನಿಮಾ ಮೂಡಿಬಂದಿದೆ.
ಸಾಯಿ ಕುಮಾರ್ ಅವರದು ‘ಚೌಕಿದಾರ್’ ಸಿನಿಮಾದಲ್ಲಿ ಪ್ರಮುಖ ಪಾತ್ರ. ಹೀರೋ ತಂದೆಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅಪ್ಪ ಎಂದರೆ ಇಡೀ ಕುಟುಂಬವನ್ನು ಕಾಯುವ ಚೌಕಿದಾರ ಎಂಬುದು ಗೊತ್ತೇ ಇದೆ. ಆ ಎಳೆಯನ್ನೇ ಇಟ್ಟುಕೊಂಡು ಈ ಸಿನಿಮಾವನ್ನು ಮಾಡಲಾಗಿದೆ. ಮಗನ ಪಾತ್ರದಲ್ಲಿ ಪೃಥ್ವಿ ಅಂಬಾರ್ ಚೆನ್ನಾಗಿಯೇ ನಟಿಸಿದ್ದಾರೆ.
ಪೃಥ್ವಿ ಅಂಬಾರ್ ಅವರು ‘ಚೌಕಿದಾರ್’ ಸಿನಿಮಾದಲ್ಲಿ ಕಿಂಚಿತ್ತೂ ಜವಾಬ್ದಾರಿ ಇಲ್ಲದ ಮಗನಾಗಿ ಕಾಣಿಸಿಕೊಂಡಿದ್ದಾರೆ. ಅತಿಯಾದ ಪ್ರೀತಿಯಿಂದ ಬೆಳೆದ ಮಕ್ಕಳು ಹೇಗಿರುತ್ತಾರೆ ಎಂಬುದನ್ನು ಅವರು ಈ ಪಾತ್ರದ ಮೂಲಕ ಕಣ್ಣಿಗೆ ಕಟ್ಟುವಂತೆ ನಟಿಸಿದ್ದಾರೆ.
ತಾಯಿ ಪಾತ್ರದಲ್ಲಿ ಶ್ವೇತಾ ವಿನೋಧಿನಿ ಅವರು ಮೆಚ್ಚುಗೆ ಗಳಿಸುತ್ತಾರೆ. ಸುಧಾರಾಣಿ, ಧನ್ಯಾ ರಾಮ್ಕುಮಾರ್ ಅವರು ಕೆಲವು ದೃಶ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ,ಆದರೂ ಚಂದ ಅನ್ನಿಸುತ್ತಾರೆ.
ನಟರಾದ ಮುನಿ ಮತ್ತು ಧರ್ಮ ಕೂಡ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಒಂದು ದೃಶ್ಯದಲ್ಲಿ ಗಿಲ್ಲಿ ನಟ ಬಂದು ಹೋಗೋದು ವಿಶೇಷ.
