ಮೈಸೂರು: ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ರೈಲ್ವೆ ಪೊಲೀಸರು 99,000 ರೂ ಮೌಲ್ಯದ ವಸ್ತುಗಳು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಆಧಾರದ ಮೇಲೆ ಸೀನಿಯರ್ ಡಿಎಸ್ ಸಿ ಮತ್ತು ಎಎಸ್ ಸಿ ಮೈಸೂರು ಅವರ ಮಾರ್ಗದರ್ಶನದಲ್ಲಿ, ಆರ್ ಪಿ ಎಫ್ ಸಿಬ್ಬಂದಿ ಹಾಸನದ ರೈಲ್ವೆ ಇನ್ಸ್ಟಿಟ್ಯೂಟ್ ಬಳಿ ಫಲಕವಿಲ್ಲದ ಹೋಂಡಾ ಆಕ್ಟಿವಾ ವಾಹನದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವ್ಯಕ್ತಿಗಳನ್ನು ಗಮನಿಸಿ ತಡೆದು ವಿಚಾರಣೆ ನಡೆಸಿದ್ದಾರೆ.
ಆಗ ಅವರು ಹಾಸನ ನಿವಾಸಿ ಶ್ರೀರಾಮು(34) ಮತ್ತು ವಿಜಯ ಎಂದು ಪರಿಚಯಿಸಿಕೊಂಡಿದ್ದಾರೆ.
ವಾಹನವನ್ನು ಪರಿಶೀಲಿಸಿದಾಗ ಸುತ್ತಿಗೆ ಮತ್ತು ಲೋಹದ ತುಂಡು ಪತ್ತೆಯಾಗಿದೆ. ಸುಮಾರು 2.30 ಗಂಟೆಗೆ ರೈಲ್ವೆ ಪ್ರದೇಶಕ್ಕೆ ಕಳವು ಉದ್ದೇಶದಿಂದ ಬಂದಿದ್ದೆ, ಆದರೆ ಪೊಲೀಸ್ ಸಂಚಾರ ಇರುವುದರಿಂದ ಕಳವು ಮಾಡಲು ಸಾಧ್ಯವಾಗಲಿಲ್ಲ ಎಂದು ಒಪ್ಪಿಕೊಂಡಿದ್ದಾನೆ.
10-15 ದಿನಗಳ ಹಿಂದೆ ಸ್ಟೋರ್ ರೂಮ್ ಬೀಗ ಒಡೆದು ರೈಲ್ವೆ ರಿಲೇಗಳನ್ನು ಕಳವು ಮಾಡಿ ಹಾಸನದ ಒಂದು ಗುಜರಿ ಅಂಗಡಿಗೆ ಮಾರಾಟ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ.
ಆತನ ಮಾಹಿತಿ ಆಧರಿಸಿ, ಆರ್ ಪಿಎಫ್ ತಂಡವು ಗೌರಿ ಕೊಪ್ಪಲು, ಎಸ್ ಬಿಐ ಬ್ಯಾಂಕ್ ಸಮೀಪದಲ್ಲಿರುವ ಗುಜರಿ ಅಂಗಡಿಗೆ ತೆರಳಿ ವಿಚಾರಿಸಲಾಗಿ, ಅಂಗಡಿ ಮಾಲೀಕರು 51 ರಿಲೇಗಳನ್ನು 8,000 ಗೆ ಖರೀದಿಸಿರುವುದಾಗಿ ಒಪ್ಪಿಕೊಂಡಿದ್ದಾರೆ.
ಶೋಧ ನಡೆಸಿದಾಗ 22 ಒಡೆದ ರಿಲೇಗಳು (ತಾಮ್ರ ಕಯಿಲುಗಳೊಂದಿಗೆ) ಹಾಗೂ ಉಳಿದ ರಿಲೇಗಳಿಂದ ತೆಗೆದ 5.7 ಕೆಜಿ ತಾಮ್ರ ತಂತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾದ ರೈಲ್ವೆ ವಸ್ತುಗಳ ಒಟ್ಟು ಮೌಲ್ಯವು ಸುಮಾರು 99,000 ರೂ ಆಗಿದೆ.
ಸಾಮಗ್ರಿಗಳು ಒಡೆದ ಮತ್ತು ಹಾನಿಗೊಳಗಾದ ಸ್ಥಿತಿಯಲ್ಲಿ ದೊರಕಿದ್ದು, ಅವುಗಳನ್ನು ಹಾಗೂ ಅಪರಾಧದಲ್ಲಿ ಬಳಸಿದ ದ್ವಿಚಕ್ರ ವಾಹನ ಮತ್ತು ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ.
