ಮೈಸೂರು: ಕೇಂದ್ರ ಬಜೆಟ್ನಿಂದ ರಾಜ್ಯಕ್ಕೆ ಅನುಕೂಲವೇನೂ ಆಗಿಲ್ಲ, ದೊಡ್ಡ ಅನ್ಯಾಯ ಆಗಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಗಂಭೀರ ಆರೋಪ ಮಾಡಿದ್ದಾರೆ.
ಕರ್ನಾಟಕದಿಂದ 17 ಬಿಜೆಪಿ ಸಂಸದರು ಆಯ್ಕೆಯಾಗಿದ್ದರೂ,ರಾಜ್ಯಕ್ಕೆ ಅನ್ಯಾಯ ಆಗಿರುವುದು ದುರ್ದೈವ ಎಂದು ಕಿಡಿ ಕಾರಿದ್ದಾರೆ.
ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ಈಗಾಗಲೇ ಘೋಷಿಸಲಾಗಿರುವ 5,300 ಕೋಟಿ ರೂ. ಇನ್ನೂ ಬಿಡುಗಡೆಯಾಗಿಲ್ಲ, ಈ ಬಾರಿಯೂ ಇದರ ಪ್ರಸ್ತಾಪ ಇಲ್ಲ. ಕರ್ನಾಟಕಕ್ಕೆ ಹಣಕಾಸು ಆಯೋಗ ಶಿಫಾರಸು ಮಾಡಿರುವ 11,495 ಕೋಟಿ ರೂ. ಅನುದಾನ ಬಿಡುಗಡೆಗೆ ಬೇಡಿಕೆ ಇತ್ತು, ಈಗ 16ನೇ ಹಣಕಾಸು ಆಯೋಗದ ಶಿಫಾರಸ್ಸು ಶುರುವಾಗಿದ್ದು ಬಹುತೇಕ ಈ ಹಣ ಬರುವುದು ಅನುಮಾನವಾಗಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಕೇಳಲಾಗಿತ್ತು, ಅದೂ ಸಾಧ್ಯವಾಗಿಲ್ಲ. ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಲು ಕೋರಲಾಗಿತ್ತು. ಈ ಬಗ್ಗೆ ನೇರ ಉಲ್ಲೇಖಗಳಿಲ್ಲ. ಬಹುಬೇಡಿಕೆಯ ರಾಯಚೂರಿಗೆ ಎಐಐಎಂಎಸ್ ಘೋಷಣೆಯಾಗದೇ ಇರುವುದು ಕರ್ನಾಟಕಕ್ಕೆ ಮಾಡಿದ ದ್ರೋಹ ಎಂದು ಸುಬ್ರಮಣ್ಯ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು- ಚೆನ್ನೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಅಭಿವೃದ್ಧಿ ಘೋಷಣೆ ಮಾಡಿದ್ದಾರೆ. ಆದರೆ ಇದರಿಂದ ರಾಜ್ಯಕ್ಕೆ ಹೆಚ್ಚು ಪ್ರಯೋಜನ ಇಲ್ಲ. ಇದರ ಬದಲು ಬೆಂಗಳೂರು-ಪುಣೆ ನಡುವೆ ಇಂಥ ಕಾರಿಡಾರ್ ಬರಬೇಕು. ಇದಕ್ಕಾಗಿ ರಾಜ್ಯದ ಮತ್ತು ಮಹಾರಾಷ್ಟ್ರದ ಸಂಸದರು ಪಕ್ಷಾತೀತವಾಗಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದಾರೆ.
ಈಗ ಘೋಷಿಸಿರುವ ಎರಡೂ ಮಾರ್ಗಗಳಲ್ಲಿ ರೈಲುಗಳು ಕರ್ನಾಟಕದೊಳಗೆ 100 ಕಿಮೀ ಕೂಡ ಓಡುವುದಿಲ್ಲ. ಇದನ್ನು ಮೋದಿ ಸರ್ಕಾರ ಪರಿಗಣಿಸದೇ ಇರುವುದು ದುರ್ದೈವದ ಸಂಗತಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಎಐನಿಂದ ವ್ಯವಸಾಯಕ್ಕೆ ಪ್ರಯೋಜನ ಇಲ್ಲ. ರೈತರ ಬೆಳೆ ರೇಷ್ಮೆಗೆ ಉತ್ತೇಜನ ಕೊಡಬೇಕು. ಸಕ್ಕರೆ ಬೆಲೆ ಏಕೆ ಏರಿಕೆ ಮಾಡುತ್ತಿಲ್ಲ, ಇದರಿಂದ ರೈತರಿಗೆ ನಷ್ಟ ಆಗುತ್ತಿದೆ. ಸಕ್ಕರೆ ಬೆಲೆ ಏರಿಸಲಿಲ್ಲ ಅಂದರೆ ಕೋಆಪರೇಟಿವ್ ಸೆಕ್ಟರ್ಗಳು ಮುಚ್ಚುವ ಹಂತಕ್ಕೆ ಬರುತ್ತದೆ. ರೈತರಿಗೆ ಕೇಂದ್ರ ಏನು ಸಹಾಯ ಮಾಡಿದೆ, 8 ರಿಂದ 9 ವರ್ಷ ಆದರೂ ಸಕ್ಕರೆ ಬೆಲೆ ಏರಿಕೆ ಮಾಡಿಲ್ಲ. ಒಟ್ಟಿನಲ್ಲಿ ಕೇಂದ್ರ ಸರ್ಕಾರ ದೇಶದ ಜನಕ್ಕೆ ಅನ್ಯಾಯ ಮಾಡಿದೆ ಎಂದು ಸುಬ್ರಮಣ್ಯ ಕಿಡಿ ಕಾರಿದ್ದಾರೆ.
