ಮೈಸೂರು,ಫೆ.1: ಆರ್ಥಿಕವಾಗಿ ಸದೃಢರಾಗಿ ಸಮಾಜದಲ್ಲಿ ಗೌರವದಿಂದ ಜೀವನ ನಡೆಸಲು ಹೆಣ್ಣು ಮಕ್ಕಳಿಗೆ ಶಿಕ್ಷಣ ಅತ್ಯಗತ್ಯ
ಎಂದು ಶಾಸಕ ಕೆ. ಹರೀಶ್ ಗೌಡ ಅವರು ತಿಳಿಸಿದರು.
ಜಿಲ್ಲಾಡಳಿತ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಮಡಿವಾಳ ಮಾಚಿದೇವ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು,ಹೆಣ್ಣು ಮಕ್ಕಳು ಶಿಕ್ಷಣ ಪಡೆದುಕೊಳ್ಳುವಂತೆ ಪೋಷಕರು ನೋಡಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ವಚನಗಳು ಜೀವನದಲ್ಲಿ ನೈತಿಕ ಮೌಲ್ಯದ ಶಿಕ್ಷಣ, ಹೆಣ್ಣು ಮಕ್ಕಳು, ಹಿರಿಯರನ್ನು ಗೌರವಿಸಬೇಕು ಎಂಬ ಪಾಠವನ್ನು ಕಲಿಸುವುದರ ಜೊತೆಗೆ ಜೀವನ ಕಟ್ಟಿಕೊಡುತ್ತದೆ ಎಂದು ಹೇಳಿದರು.
ಪ್ರತಿದಿನ ಮಾಚಿದೇವರು ಸೇರಿದಂತೆ ಎಲ್ಲಾ ಶ್ರೇಷ್ಠ ವಚನಕಾರರನ್ನು ಸ್ಮರಿಸಬೇಕು. ಅವರ ವಚನಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಚನಗಳ ಮೂಲಕ ಸಮಾಜದ ಸುಧಾರಣೆ ಸಾಧ್ಯ ಎಂದು ಶಾಸಕರು ಅಭಿಪ್ರಾಯ ಪಟ್ಟರು.
ಮಡಿವಾಳ ಸಮುದಾಯದವರು ಸಲ್ಲಿಸಿರುವ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಜೊತೆಗೆ ಶೇಷಾದ್ರಿ ಪುರಂ ಸರ್ಕಲ್ ಗೆ ಮಡಿವಾಳ ಮಾಚಯ್ಯ ಹೆಸರು ಇಡಲು ಚರ್ಚೆ ನಡೆಸುತ್ತೇನೆ ಎಂದು ಹರೀಶ್ ಗೌಡ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಡಾ. ಡಿ ತಿಮ್ಮಯ್ಯ ಅವರು ಮಾತನಾಡಿ 12 ನೇ ಶತಮಾನದಲ್ಲಿ ಬಸವಣ್ಣ ಅವರ ಅನುಭವ ಮಂಟಪದಲ್ಲಿ ಯಾವುದೇ ಜಾತಿ, ಮೇಲು ಕೀಳು ಎಂಬ ಬೇಧ ಭಾವವಿಲ್ಲದೆ ಎಲ್ಲಾ ವರ್ಗದ ವಚನಕಾರರು ಒಗ್ಗೂಡಿ ವಚನಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಪ್ರಯತ್ನಿಸುತ್ತಿದ್ದರು ಹಾಗೂ ಚರ್ಚೆಗಳನ್ನು ನಡೆಸುತ್ತಿದ್ದರು ಎಂದು ತಿಳಿಸಿದರು.
ಅನುಭವ ಮಂಟಪದಲ್ಲಿ ಮಡಿವಾಳ ಮಾಚಯ್ಯ,ಅಂಬಿಗರ ಚೌಡಯ್ಯ, ಹರಳಯ್ಯ,ದೋಹಾರ ಕಕ್ಕಯ್ಯ ಸೇರಿದಂತೆ ಎಲ್ಲಾ ವಚನಕಾರರು ದುಡಿಮೆಯ ದೇವರು, ಕಾಯಕದ ಮೂಲಕ ಕೈಲಾಸ ನೋಡಿ ಹಾಗೂ ಪ್ರತಿಯೊಂದು ಕಾಯಕವನ್ನು ಗೌರವಿಸಿ ಸಮ ಸಮಾಜ ನಿರ್ಮಾಣ ಮಾಡಿ ಎಂಬ ಸಂದೇಶವನ್ನು ವಚನಗಳ ಮೂಲಕ ತಿಳಿಸಿದ್ದಾರೆ ಎಂದು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅವರು ಮಾತನಾಡಿ, ಶ್ರೇಷ್ಠರ ತತ್ವ ಹಾಗೂ ಆದರ್ಶವನ್ನು ಅನುಸರಿಸಲು ಜಯಂತಿ ಆಚರಣೆ ಸಂದರ್ಭದಲ್ಲಿ ಮಹಾನ್ ವ್ಯಕ್ತಿಯ ಹುಟ್ಟಿನ ನೆಲೆ ಮತ್ತು ಬದುಕಿನ ಬೆಲೆ ತಿಳಿಸುತ್ತದೆ. ಮಾಚಯ್ಯ ಅವರ ಕಾಯಕ ಮತ್ತು ನಡತೆ ಯಿಂದ ಮಾಚಿದೇವ ಎಂಬ ಹೆಸರು ಪಡೆದುಕೊಂಡರು, ಮಾನವ ಕೂಡ ದೇವರಾಗ ಬಹುದು ಎಂದು ತೋರಿಸಿಕೊಟ್ಟವರು ಮಡಿವಾಳ ಮಾಚಿದೇವರು ಎಂದು ಹೇಳಿದರು.
ಶರಣ ಪ್ರವಚನಕಾರ ಯಡಿಯೂರು ಮೂಡಲಗಿರಿ ಅವರು ಮಾತನಾಡಿ ಮಡಿವಾಳ ಮಾಚಯ್ಯ ಅವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವರ ಹಿಪ್ಪರಿಗೆಯಲ್ಲಿ ಜನಿಸಿದರು.ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಅವರು ಬಸವಣ್ಣ ಅವರನ್ನು ಅನುಸರಿಸಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಯ ಜಿಲ್ಲಾ ಅಧ್ಯಕ್ಷರಾದ ಅರುಣ್, ಗಣ್ಯರಾದ ಮಹಮದ್ ರಫಿ,ಮಂಜುನಾಥ್, ಚನ್ನಕೇಶವ ,ಬಿ ಜಿ ಕೇಶವ, ರವಿನಂದನ್,ಮಂಜು ಶೆಟ್ಟಿ, ಸಿದ್ದಪಾಜಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
