ಬಾಲಿವುಡ್ ನಟ ಸುನಿಲ್ ಶೆಟ್ಟಿ ಹಿಂದಿಯಲ್ಲಷ್ಟೇ ಅಲ್ಲಾ ಹಲವು ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸಿ ಭೇಶ್ ಅನಿಸಿಕೊಂಡಿದ್ದಾರೆ.
ಕನ್ನಡದಲ್ಲೂ ಸುನಿಲ್ ಶೆಟ್ಟಿ ಹೆಸರು ಮಾಡಿದ್ದಾರೆ,ಅವರು ಸುದೀಪ್ ಜೊತೆ ‘ಪೈಲ್ವಾನ್’ ಚಿತ್ರದಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದಾರೆ.
ಇತ್ತೀಚೆಗಷ್ಟೆ ಅವರು ತಮ್ಮ ಮಾತೃಭಾಷೆಯಾದ ತುಳುವಿನಲ್ಲಿ ಸಿನಿಮಾ ಮಾಡಿದ್ದು, ಬಾಲಿವುಡ್ ವೇದಿಕೆಯಲ್ಲಿ ತುಳು ಚಿತ್ರವನ್ನು ಹೊಗಳಿದ್ದಾರೆ.
ಸುನಿಲ್ ಶೆಟ್ಟಿ ಬಾಲಿವುಡ್ ಸ್ಟಾರ್ ನಟರಲ್ಲಿ ಒಬ್ಬರು. ಮಂಗಳೂರು ಮೂಲದ ಅವರು, ದಶಕಗಳಿಂದಲೂ ಬಾಲಿವುಡ್ನಲ್ಲಿ ನಟಿಸುತ್ತಿದ್ದಾರೆ.
ಹಲವು ಅತ್ಯುತ್ತಮ ಸಿನಿಮಾಗಳಲ್ಲಿ ನಟಿಸಿರುವ ಸುನಿಲ್ ಶೆಟ್ಟಿ, ಬಾಲಿವುಡ್ನಲ್ಲಿ ಬಾಡಿ ಬಿಲ್ಡಿಂಗ್ ಸಂಸ್ಕೃತಿ ಹುಟ್ಟುಹಾಕಿದರು.
ಹಿಂದಿಯ ಜನಪ್ರಿಯ ಶೋ ಲಲ್ಲನ್ಟಾಪ್’ನಲ್ಲಿ ಸುನಿಲ್ ಶೆಟ್ಟಿ ಭಾಗವಹಿಸಿ, ತಾವು ನಟಿಸಿರುವ ತುಳು ಸಿನಿಮಾ ‘ಜೈ’ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.
ನಾನು ತುಳುನಾಡಿನವನು, ಮಂಗಳೂರು ನನ್ನ ಊರು. ನಾನು ಇತ್ತೀಚೆಗಷ್ಟೆ ಒಂದು ತುಳು ಸಿನಿಮಾನಲ್ಲಿ ನಟಿಸಿದೆ. ತುಳು ಸಿನಿಮಾಗಳಿಗೆ ಬಹಳ ಎಂದರೆ ಬಹಳ ಕಡಿಮೆ ವೀಕ್ಷಕರಿದ್ದಾರೆ. ಆ ಚಿತ್ರರಂಗಕ್ಕೆ ಬೆಂಬಲ ನೀಡಲೆಂದು ನಾನು ತುಳು ಸಿನಿಮಾನಲ್ಲಿ ನಟಿಸಿದೆ, ಸಿನಿಮಾ ಬಹಳ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ನನ್ನ ನಟನೆಗೆ ಬಹಳ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಬಹುಷಃ ನನ್ನ ಮೊದಲ ಸಿನಿಮಾ ‘ಬಲವಾನ್’ನಲ್ಲಿ ನನಗೆ ಸಿಕ್ಕಂಥ ಪ್ರಶಂಸೆ ಈಗ ‘ಜೈ’ ಸಿನಿಮಾಕ್ಕಾಗಿ ಸಿಗುತ್ತಿದೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.
ಈಗ ಭಾಷೆಯ ಗಡಿ ಇಲ್ಲ, ಈಗ ಇರುವುದು ಏನಿದ್ದರೂ ಕಂಟೆಂಟ್ ಗಡಿ. ನಿಮ್ಮಲ್ಲಿ ಒಳ್ಳೆಯ ಕಂಟೆಂಟ್ ಇದ್ದರೆ ಭಾಷೆ ಅದಕ್ಕೆ ಅಡ್ಡಿ ಆಗುವುದಿಲ್ಲ, ಯಾವುದೇ ಭಾಷೆ ಆದರೂ ಕಂಟೆಂಟ್ ಚೆನ್ನಾಗಿದ್ದರೆ ಖಂಡಿತ ಅದನ್ನು ಜನ ಒಪ್ಪುತ್ತಾರೆ ಎಂದು ಸುನಿಲ್ ತಿಳಿಸಿದ್ದಾರೆ.
