ನಂಜನಗೂಡು: ಭಾರತೀಯ ಸಮಾಜದಲ್ಲಿ ಹಿರಿಯ ನಾಗರಿಕರು ಕುಟುಂಬ ಮತ್ತು ಸಮಾಜದ ಆಧಾರಸ್ತಂಭಗಳಾಗಿದ್ದಾರೆ ಎಂದು ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ
ಪ್ರಾಂಶುಪಾಲ ಸಿ.ಆರ್. ದಿನೇಶ್ ಅಭಿಪ್ರಾಯ ಪಟ್ಟರು.
ತಮ್ಮ ಜೀವನಪೂರ್ತಿ ದುಡಿದು, ಕುಟುಂಬ ಮತ್ತು ರಾಷ್ಟ್ರದ ನಿರ್ಮಾಣಕ್ಕೆ ಕೊಡುಗೆ ನೀಡಿದ ಹಿರಿಯರಿಗೆ ಗೌರವಯುತ, ಸುರಕ್ಷಿತ ಹಾಗೂ ಆರೋಗ್ಯಕರ ಜೀವನ ಒದಗಿಸುವುದು ಸಮಾಜದ ಮಹತ್ತರ ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದರು.
ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ ಸರ್ಕಾರ ಸಾಮಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಕರ್ನಾಟಕ ಸರ್ಕಾರ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ , ಶಾಲಾ ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆ ಹಾಗೂ ಹಿರಿಯ ಸ್ವಯಂ ಸೇವಕ ಸಂಸ್ಥೆಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ಅಂತರ ಪೀಳಿಗೆಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ದಿನೇಶ್ ಅವರು ಮಾತನಾಡಿದರು.
ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಜಾಗೃತಿ ಕಾರ್ಯಕ್ರಮಗಳು ಅತ್ಯಂತ ಅವಶ್ಯಕವಾಗಿವೆ ಎಂದು ಹೇಳಿದರು.
ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಹಿರಿಯ ನಾಗರಿಕರಲ್ಲಿ ತಮ್ಮ ಹಕ್ಕುಗಳು, ಕರ್ತವ್ಯಗಳು ಮತ್ತು ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವುದು ಎಂದು ತಿಳಿಸಿದರು.
ಬಹುತೇಕ ಹಿರಿಯರು ಸರ್ಕಾರದ ಪಿಂಚಣಿ, ಆರೋಗ್ಯ ಯೋಜನೆಗಳು, ಸಾಮಾಜಿಕ ಭದ್ರತಾ ಯೋಜನೆಗಳು ಹಾಗೂ ಕಾನೂನು ರಕ್ಷಣೆಗಳ ಕುರಿತು ಸಂಪೂರ್ಣ ಮಾಹಿತಿ ಹೊಂದಿರದೆ ಇರುವುದು ಗಮನಕ್ಕೆ ಬಂದಿದೆ. ಈ ಕೊರತೆಯನ್ನು ನೀಗಿಸುವುದಕ್ಕಾಗಿ ಜಾಗೃತಿ ಕಾರ್ಯಕ್ರಮಗಳ ಆಯೋಜನೆ ಅಗತ್ಯ ಹಾಗೂ ಅನಿವಾರ್ಯ ಎಂದು ಪ್ರಾಂಶುಪಾಲ ಸಿ.ಆರ್.ದಿನೇಶ್ ತಿಳಿಸಿದರು.
ಸ್ವಯಂ ಸೇವಾ ಸಂಸ್ಥೆಯ ಶ್ರೀ ಮಂಜುನಾಥ ಅವರು ಮಾತನಾಡಿ ಕಾರ್ಯಕ್ರಮದ ಅಂಗವಾಗಿ ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ–2007 ಕುರಿತು ವಿವರಿಸಲಾಗುತ್ತದೆ. ಈ ಕಾಯ್ದೆಯ ಮೂಲಕ ಹಿರಿಯರಿಗೆ ಮಕ್ಕಳಿಂದ ಅಥವಾ ಬಂಧುಗಳಿಂದ ನಿರ್ವಹಣೆ ಪಡೆಯುವ ಹಕ್ಕು, ದೌರ್ಜನ್ಯ ಮತ್ತು ನಿರ್ಲಕ್ಷ್ಯದಿಂದ ರಕ್ಷಣೆ, ಹಾಗೂ ದೂರು ಸಲ್ಲಿಸುವ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಜೊತೆಗೆ, ಹಿರಿಯ ನಾಗರಿಕರ ಸಹಾಯವಾಣಿ ಸಂಖ್ಯೆ, ಪೊಲೀಸ್ ಸಹಕಾರ ವ್ಯವಸ್ಥೆ ಮತ್ತು ಜಿಲ್ಲಾ ಮಟ್ಟದ ಪರಿಹಾರ ಸಮಿತಿಗಳ ಕುರಿತು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಆರೋಗ್ಯ ಜಾಗೃತಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಉಚಿತ ಆರೋಗ್ಯ ತಪಾಸಣೆ, ರಕ್ತದೊತ್ತಡ, ಮಧುಮೇಹ, ಕಣ್ಣು ಮತ್ತು ಕಿವಿ ತಪಾಸಣೆ, ಮಾನಸಿಕ ಆರೋಗ್ಯ ಸಲಹೆ ಹಾಗೂ ಪೋಷಕ ಆಹಾರದ ಮಹತ್ವ ಕುರಿತು ತಜ್ಞ ವೈದ್ಯರಿಂದ ಮಾಹಿತಿ ನೀಡಲಾಗುತ್ತದೆ. ಜೊತೆಗೆ, ಯೋಗ, ಧ್ಯಾನ ಮತ್ತು ಸರಳ ವ್ಯಾಯಾಮಗಳ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಬನ್ನೂರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕ ಡಾ. ಕೆ ಮಹದೇವಸ್ವಾಮಿ ಅವರು, ಸಾಮಾಜಿಕವಾಗಿ ಹಿರಿಯ ನಾಗರಿಕರು ಎದುರಿಸುವ ಏಕಾಂತ, ನಿರ್ಲಕ್ಷ್ಯಗಳಿಂದ ಕುಟುಂಬ ಸದಸ್ಯರು ಹಿರಿಯರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಬೇಕಾದ ಅಗತ್ಯ, ಅವರ ಅನುಭವ ಮತ್ತು ಮಾರ್ಗದರ್ಶನವನ್ನು ಗೌರವಿಸುವ ಸಂಸ್ಕೃತಿಯನ್ನು ಬೆಳೆಸಬೇಕೆಂಬ ಸಂದೇಶವನ್ನು ಕಾರ್ಯಕ್ರಮ ಸಾರುತ್ತದೆ. ಹಿರಿಯ ನಾಗರಿಕರು ಸಮಾಜದಿಂದ ದೂರವಾಗದೆ, ಸಕ್ರಿಯವಾಗಿ ಭಾಗವಹಿಸುವಂತೆ ಪ್ರೇರೇಪಿಸುವುದು ಇದರ ಮತ್ತೊಂದು ಉದ್ದೇಶವಾಗಿದೆ ಎಂದು ಹೇಳಿದರು.
ಹಿರಿಯ ಉಪನ್ಯಾಸಕ ಎಸ್. ಲಿಂಗಣ್ಣ ಸ್ವಾಮಿ ಮಾತನಾಡಿ ಈ ಜಾಗೃತಿ ಕಾರ್ಯಕ್ರಮಗಳು ಯುವ ಪೀಳಿಗೆಗೆ ಹಿರಿಯರ ಮೌಲ್ಯ, ತ್ಯಾಗ ಮತ್ತು ಕೊಡುಗೆಗಳನ್ನು ನೆನಪಿಸುವ ಕಾರ್ಯವನ್ನೂ ಮಾಡುತ್ತವೆ. ಇದರಿಂದ ತಲೆಮಾರಿನ ನಡುವಿನ ಸಂಬಂಧಗಳು ಬಲವಾಗುತ್ತವೆ ಹಾಗೂ ಸಾಮಾಜಿಕ ಸೌಹಾರ್ದತೆ ಹೆಚ್ಚುತ್ತದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವ ಮೂಲಕ ಮಾನವೀಯ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ಮತ್ತಷ್ಟು ಗಟ್ಟಿಗೊಳಿಸಬಹುದು ಎಂದು ಹೇಳಿದರು .
ಇಂದಿನ ವಿದ್ಯಾರ್ಥಿಗಳಿಗೆ ಹಿರಿಯ ನಾಗರಿಕರ ಬಗ್ಗೆ ಮಾಹಿತಿ ನೀಡಿದ್ದು ಮತ್ತು ಅವರ ಮನೆಯಲ್ಲಿ ಹಾಗೂ ನೆರೆಹೊರೆಯವರಲ್ಲಿ ಇರುವವರನ್ನು ಗೌರವಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಹಾಗಾಗಿ ಇಂತಹ ಕಾರ್ಯಕ್ರಮಗಳನ್ನು ಕಾಲೇಜು ಮಟ್ಟದಲ್ಲಿ ಆಯೋಜಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ರಂಗಸ್ವಾಮಿ ,ಹೆಚ್.ಕೆ.ಪ್ರಕಾಶ್, ಡಾ. ಟಿ ಕೆ ರವಿ, ಬಿಂದು ಮತ್ತಿತರರು ಉಪಸ್ಥಿತರಿದ್ದರು.
