ಮೈಸೂರು: ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ವಾಗ್ದಾಳಿ ನಡೆಸಿದ್ದಾರೆ.
ಮೈಸೂರು ಅರಮನೆ ಆವರಣದಲ್ಲಿ ಮಾವುತರು,ಕಾವಾಡಿಗಳ ಕುಟುಂಬದವರಿಗೆ ಉಪಹಾರ ನೀಡಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಬ್ಲ್ಯಾಕ್ ಮೇಲ್ ಸರ್ಕಾರವಿದೆ. ಅವರ ಪಾರ್ಟಿಯವರೇ ಸರ್ಕಾರದೊಳಗೆ ಬ್ಲ್ಯಾಕ್ ಮೇಲ್ ಮಾಡಿ ಆಡಳಿತ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಇದೇ ರೀತಿ ರಾಜೀನಾಮೆ ಕೊಡಿಸಿದರು ಅನ್ನೋ ಮಾಹಿತಿ ಇದೆ. ಇದೊಂದು ಕಪ್ಪುಚುಕ್ಕೆ. ಅಧಿಕಾರಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಾರೆ ಎಂದು ಟೀಕಿಸಿದರು.
ಸ್ಟಿಂಗ್ ಮಾಡುತ್ತಾರೆ, ಸಿಡಿ ಇಟ್ಟುಕೊಂಡು ಕೆಲವರಿಗೆ ಬೆದರಿಸುತ್ತಾರೆ. ಕರ್ನಾಟಕದಲ್ಲಿ ಏನಾಗುತ್ತಿದೆ ಎಂದು ಬೇರೆ ರಾಜ್ಯದವರು ಕೇಳುತ್ತಿದ್ದಾರೆ. ಇದು ಯಾರಿಗೂ ಶೋಭೆ ತರುವುದಿಲ್ಲ. ಇದಕ್ಕೆ ಇತಿಶ್ರೀ ಹಾಡಬೇಕು. ತಕ್ಷಣ ಎಸ್ಐಟಿ ತನಿಖೆ ನಡೆಸಿ ಕೃತ್ಯವೆಸಗಿದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ನಾನು ಸಿಎಂ ಬಳಿ ಮನವಿ ಮಾಡುತ್ತೇನೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
