ಟೆಹರಾನ್: ಇರಾನ್ನಲ್ಲಿ ಭಾರಿ ಪ್ರತಿಭಟನೆಗಳು ನಡೆಯುತ್ತಿದ್ದು ದೇಶವನ್ನು ತಲ್ಲಣಗೊಳಿಸಿದೆ.
ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ.
ಈ ಪ್ರತಿಭಟನೆಗಳು ಮೊದಲು ರಾಜಧಾನಿ ಟೆೆಹ್ರಾನ್ನಲ್ಲಿ ಆರಂಭವಾಗಿದ್ದು, ಮಂಗಳವಾರ ಕನಿಷ್ಠ ಹತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ ಬಳಿಕ ಇತರ ಪ್ರದೇಶಗಳಿಗೂ ವಿಸ್ತರಿಸಿವೆ.
ದೇಶದ ಆರ್ಥಿಕ ಕುಸಿತ, ಬೆಲೆಯೇರಿಕೆ, ನಿರುದ್ಯೋಗ ಸಮಸ್ಯೆಗಳು ಯುವಜನರನ್ನು ಬೀದಿಗಿಳಿಯುವಂತೆ ಮಾಡಿವೆ.
ಡಿಸೆಂಬರ್ನಲ್ಲಿ ಬೆಲೆ ಏರಿಕೆ ಪ್ರಮಾಣ ಅಧಿಕೃತವಾಗಿ 42.5 ಶೇಕಡಕ್ಕೆ ಏರಿಕೆಯಾಗಿದೆ. ಸರ್ಕಾರ ದೇಶಿ ಕರೆನ್ಸಿಯ ತೀವ್ರ ಕುಸಿತವನ್ನು ನಿಭಾಯಿಸಿದ ರೀತಿ ಹಾಗೂ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ವ್ಯಾಪಾರಿಗಳು ಬೀದಿಗೆ ಇಳಿಯುವುದರೊಂದಿಗೆ ಈ ಪ್ರತಿಭಟನೆಗಳು ಆರಂಭವಾಗಿವೆ.
ವ್ಯಾಪಾರಿಗಳು, ಅಂಗಡಿ ಮಾಲೀಕರು ಮತ್ತು ಹಲವು ಇರಾನಿಯನ್ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಪ್ರಮುಖ ಬಜಾರ್, ಮಾರುಕಟ್ಟೆಗಳನ್ನು ಬಂದ್ ಮಾಡಿದ್ದಾರೆ.
ಪ್ರತಿಭಟನಾಕಾರರು ಕಲ್ಲು ತೂರಿದ ಪರಿಣಾಮ ಕೆಲವು ಕಟ್ಟಡಗಳು ತೀವ್ರವಾಗಿ ಹಾನಿಗೊಂಡಿವೆ. ದೊಂಬಿಯ ಮುಖ್ಯ ಪ್ರಚೋದಕರು ಎಂದು ಕರೆಯಲ್ಪಟ್ಟ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ನೇತೃತ್ವದ ಇರಾನ್ನ ನಾಗರಿಕ ಸರ್ಕಾರವು ಪ್ರತಿಭಟನಾಕಾರರೊಂದಿಗೆ ಸಂವಾದಕ್ಕೆ ಸಿದ್ಧವಾಗಿದ್ದೇವೆ ಎಂದು ಹೇಳಿದೆ.
