ಕೊಳ್ಳೇಗಾಲ: ತನ್ನ ತಂದೆಗೆ 2 ನೇ ತಾಯಿ ಈ ಶಬರಿ.ತಂದೆ–ಮಗಳ ಪ್ರೀತಿಯ ಕಥಾಹಂದರವನ್ನು ಹೊತ್ತು ಬರುತ್ತಿರುವ ಚಿತ್ರ ಶಬರಿ ಅ. 23 ರಂದು ಬಿಡುಗಡೆಗೆ ಸಜ್ಜಾಗಿದೆ.
ತಂದೆ–ಮಗಳ ನಡುವಿನ ಅನನ್ಯ ಬಾಂಧವ್ಯ, ಪ್ರೀತಿ, ಭಾವನೆ ಹಾಗೂ ಕುಟುಂಬದ ಮೌಲ್ಯಗಳನ್ನು ಪ್ರಧಾನವಾಗಿಟ್ಟುಕೊಂಡು ಚಿತ್ರಿಸಿರುವ ಚಿತ್ರ ಶಬರಿ. ಕನ್ನಡದ ‘ಶಬರಿ’ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಅಕ್ಟೋಬರ್ 23ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.
ತಂದೆ ಮಗಳ ನಡುವಿನ ಅನನ್ಯ ಬಾಂಧವ್ಯವನ್ನು ಚಿತ್ರದ ಮೂಲಕ ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದಾರೆ ಉದಯೋನ್ಮುಖ ನಿರ್ದೇಶಕ ಒರಟು ಶ್ರೀ.
ಮಗಳು ಎಂದರೆ ತಂದೆಗೆ ಕೇವಲ ಮಗಳಲ್ಲ, ಎರಡನೇ ತಾಯಿಯಂತೆಯೇ ಎಂಬ ಭಾವನೆಯನ್ನು ಕಥೆಯ ಮೂಲಕ ಕಟ್ಟಿಕೊಡಲಾಗಿದ್ದು, ಕುಟುಂಬದ ಸಂಬಂಧಗಳ ಮಹತ್ವವನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸಲಾಗಿದೆ.
ಎಲ್ಲಾ ವಯೋಮಾನದ ಪ್ರೇಕ್ಷಕರು ಕುಟುಂಬ ಸಮೇತ ಕುಳಿತು ವೀಕ್ಷಿಸಬಹುದಾದ ಚಿತ್ರವಾಗಿ ‘ಶಬರಿ’ ಮೂಡಿಬಂದಿದೆ.
ಭೈರವಿ ಫಿಲಂಸ್ ಲಾಂಛನದಲ್ಲಿ ಮೂಡಿ ಬಂದಿರುವ ಚಿತ್ರಕ್ಕೆ ಒರಟು ಶ್ರೀ ನಿರ್ದೇಶನ ನೀಡಿದ್ದು, ರಮೇಶ್ ಬಿ. ಸುಧಾಕರ್ ರೆಡ್ಡಿ, ಯಾಕಸಿರಿ ಹಾಗೂ ವಿಕ್ರಾಂತ್ ಎ. ನಿರ್ಮಾಪಕರಾಗಿದ್ದಾರೆ.
ಬಿ.ಆರ್. ಹೇಮಂತ್ ಕುಮಾರ್ ಸಂಗೀತ ನಿರ್ದೇಶನ, ಸಾಮ್ಯುಲ್ ನಾಗರಾಜ್ ಛಾಯಾಗ್ರಹಣ ಹಾಗೂ ಕೆ. ಗಿರೀಶ್ ಕುಮಾರ್ ಸಂಕಲನದ ಜವಾಬ್ದಾರಿ ವಹಿಸಿದ್ದಾರೆ. ಕೋರ ಜಿನ್ನಯ್ಯ ಸಾಹಿತ್ಯ ರಚಿಸಿದ್ದು, ಫೆನ್ನಯ್ಯ ಸಂಭಾಷಣೆ ಬರೆದಿದ್ದಾರೆ.
ಸಮರ್ಥ್ ನಾಯಕನಟ ಹಾಗೂ ಕೃತಿಕಾ ಗೌಡ ನಾಯಕಿಯಾಗಿ ಅಭಿನಯಿಸಿದ್ದಾರೆ. ಧನ್ನಿ, ನೀನಾಸಂ ಅಶ್ವಥ್, ಎಂ.ಕೆ. ಮಹೇಶ್, ಸೀತಾ ಹರ್ಷವರ್ಧನ್, ಮಂಡ್ಯ ಸಿದ್ದು ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರತಂಡದ ರೂಪ ಮಹೇಶ್ ಮಾತನಾಡಿ, ‘ಶಬರಿ’ ಕೇವಲ ಮನರಂಜನೆಗೆ ಸೀಮಿತವಾಗಿರುವ ಚಿತ್ರವಲ್ಲ. ತಂದೆ–ಮಗಳ ನಡುವಿನ ಪ್ರೀತಿ, ಭಾವನೆ ಮತ್ತು ಬಾಂಧವ್ಯದ ಆಳವನ್ನು ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶದಿಂದ ಚಿತ್ರ ನಿರ್ಮಿಸಲಾಗಿದೆ. ಪ್ರೇಕ್ಷಕರು ಕುಟುಂಬ ಸಮೇತ ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರವನ್ನು ವೀಕ್ಷಿಸುವ ಮೂಲಕ ಚಿತ್ರತಂಡವನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಚಿತ್ರತಂಡದ ಕುಮಾರ್ ಮಾತನಾಡಿ, ‘ಶಬರಿ’ಯಲ್ಲಿ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಕಥೆ, ಭಾವನಾತ್ಮಕ ಸನ್ನಿವೇಶಗಳು ಹಾಗೂ ಕುಟುಂಬದ ಸಂಬಂಧಗಳಿಗೆ ಮಹತ್ವ ನೀಡಲಾಗಿದೆ. ಅಕ್ಟೋಬರ್ 23 ರಂದು ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರವನ್ನು ವೀಕ್ಷಿಸುವಂತೆ ಮನವಿ ಮಾಡಿದರು.
ತಂದೆ–ಮಗಳ ಬಾಂಧವ್ಯದ ಭಾವನಾತ್ಮಕ ಕಥೆಯನ್ನು ಹೊತ್ತು ಬರುತ್ತಿರುವ ‘ಶಬರಿ’ ಚಿತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಯಾವ ರೀತಿಯ ಸ್ಥಾನ ಪಡೆದುಕೊಳ್ಳಲಿದೆ ಎಂಬುದನ್ನು ಚಿತ್ರ ಬಿಡುಗಡೆಯ ಬಳಿಕ ಕಾದು ನೋಡಬೇಕಿದೆ.
