ನೇಪಾಳ: ಅತ್ಯಂತ ಕಿರಿಯ ರಾಜಕಾರಣಿಯಾದ ಬಾಲೇಂದ್ರ ಶಾ (ಬಾಲೆನ್) ಶುಕ್ರವಾರ ನೇಪಾಳದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಜೆನ್ ಝಡ್ ಪ್ರತಿಭಟನೆಯಿಂದ ಕೆ.ಪಿ.ಶರ್ಮಾ ಓಲಿ ನೇತೃತ್ವದ ಸರ್ಕಾರ ಪದಚ್ಯುತಗೊಂಡ ಸುಮಾರು ಆರು ತಿಂಗಳ ನಂತರ, ಸಂವಿಧಾನದ 76 (1)ನೇ ವಿಧಿಯನ್ವಯ ಬಾಲೇಂದ್ರ ಶಾ ಅವರನ್ನು ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಅವರು 47ನೇ ಪ್ರಧಾನಿಯಾಗಿ ನೇಮಿಸಿದರು.
ರಾಷ್ಟ್ರೀಯ ಸ್ವತಂತ್ರ ಪಕ್ಷದ ನಾಯಕಿ ಶೀತಲ್ ನಿವಾಸ್ನಲ್ಲಿರುವ ಅಧ್ಯಕ್ಷರ ಕಚೇರಿಯಲ್ಲಿ ಮಧ್ಯಾಹ್ನ 12.34ಕ್ಕೆ 35 ವರ್ಷದ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕರಿಸಿದರು.
ಬಾಲೇಂದ್ರ ಶಾ ಅವರು
ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆದಿರುವುದು ವಿಶೇಷ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ದೇಶದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಸಾಮಾಜಿಕ ಮಾಧ್ಯಮ ನಿಷೇಧದ ವಿರುದ್ಧ ಯುವ ಜನತೆ ನೇತೃತ್ವದ ಜೆನ್ ಝಡ್ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ನಂತರ, ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪದಚ್ಯುತಿಗೊಂಡಿತು. ಇದರ ನಂತರ ಬಾಲೇಂದ್ರ ಶಾ ಅವರು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮೊದಲ ಪ್ರಧಾನಿಯಾಗಿದ್ದಾರೆ.
ಬಾಲೆನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಹಿಂದೂ ಮತ್ತು ಬೌದ್ಧ ಧಾರ್ಮಿಕ ಸಂಪ್ರದಾಯಗಳ ವಿಶಿಷ್ಟ ಮಿಶ್ರಣ ಗಮನ ಸೆಳೆಯಿತು. ಇದು ಏಳು ಬ್ರಾಹ್ಮಣರಿಂದ ಶಂಖನಾದ, 108 ಹಿಂದೂ ಪಟುಗಳು ಅಥವಾ ಯುವ ಬ್ರಾಹ್ಮಣರಿಂದ ವೈದಿಕ ಸ್ತೋತ್ರಗಳು ಅಥವಾ ಸ್ವಸ್ತಿ ಪಠಣ ಮತ್ತು 107 ಲಾಮಾಗಳಿಂದ ಮಂಗಲ್ ವಚನ್ ಅಥವಾ ಬೌದ್ಧ ಧರ್ಮಗ್ರಂಥದ ಪಠಣ ಸೇರಿದಂತೆ ವಿಸ್ತಾರವಾದ ಧಾರ್ಮಿಕ ಆಚರಣೆಗಳು ಸಮಾರಂಭದಲ್ಲಿ ನಡೆದದ್ದು ಕೂಡಾ ವಿಶೇಷ.
