ಬೆಂಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ದರ ಇಳಿಸಲು ಕ್ರಮ ವಹಿಸಿದೆ. ಆದರೆ ಕಾಂಗ್ರೆಸ್ ಸರ್ಕಾರ ದರ ಏರಿಕೆ ಮಾಡಿ ಲಾಭ ಮಾಡಿಕೊಳ್ಳಲು ಮುಂದಾದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮನವಮಿಯ ಸಮಯದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.
ಹಿಂದೆ ತುಪ್ಪದ ಮೇಲಿನ ಜಿಎಸ್ಟಿ ಇಳಿಸಿದಾಗ ಕಾಂಗ್ರೆಸ್ ಸರ್ಕಾರ ದರ ಏರಿಕೆ ಮಾಡಿತ್ತು. ಈಗ ತೈಲ ದರ ಏರಿಸಲು ಮುಂದಾದರೆ ತೀವ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ದರ ಇಳಿಕೆಯನ್ನು ಚುನಾವಣೆಗೆ ಲಿಂಕ್ ಮಾಡಬಾರದು. ದೇಶದಲ್ಲಿ ವರ್ಷವಿಡೀ ಚುನಾವಣೆ ನಡೆಯುತ್ತಿರುತ್ತದೆ. ಯಾವುದೇ ಉತ್ತಮ ಕ್ರಮ ಕೈಗೊಂಡರೂ ಕಾಂಗ್ರೆಸ್ನವರು ಟೀಕೆ ಮಾಡುತ್ತಾರೆ. ಈಗಲೂ ಹಾಗೆಯೇ ಟೀಕೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ 1.32 ಲಕ್ಷ ಕೋಟಿ ರೂ. ಸಾಲ ಮಾಡಿದ್ದು, ಇನ್ನು ಮುಂದೆ ಒಂದೊಂದೇ ತೆರಿಗೆಗಳು ಆರಂಭವಾಗಲಿದೆ. ಕಳೆದ ಮೂರು ವರ್ಷದಲ್ಲಿ ಅವರೊಬ್ಬರೇ ಮೂರೂವರೆ ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ ಎಂದು ದೂರಿದರು.
ಜಕ್ಕೂರಿನ ವಾಯುಯಾನ ತರಬೇತಿ ಶಾಲೆಯನ್ನು ಮುಚ್ಚಿ ಕಾಂಪ್ಲೆಕ್ಸ್ ನಿರ್ಮಿಸುವ ಹುನ್ನಾರ ನಡೆದಿದೆ, ಅದರ ವಿರುದ್ಧ ಸದನದಲ್ಲಿ ಮಾತಾಡಿ ಉಳಿಸುವ ಕೆಲಸ ಮಾಡಿದ್ದೇವೆ. ಟಿ.ನರಸೀಪುರ ರೇಷ್ಮೆ ನೂಲು ತೆಗೆಯುವ ಕಾರ್ಖಾನೆಯ 6 ಎಕರೆ ಜಾಗವನ್ನು ಕಬಳಿಸುವುದರ ವಿರುದ್ಧ ಹೋರಾಟ ಮಾಡಿದ್ದು, ಅದನ್ನು ಮುಚ್ಚಲ್ಲ ಎಂದು ಸಚಿವರು ಹೇಳಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಗಾಳಿಗೋಪುರದ ಯೋಜನೆಗಳನ್ನು ಸರ್ಕಾರ ನೀಡಿದೆ. ಮೊದಲಿಗೆ ಬ್ರ್ಯಾಂಡ್ ಎಂದು ಹೇಳಿ, ಇರುವ ಬೆಂಗಳೂರನ್ನೇ ಹಾಳು ಮಾಡಿದ್ದಾರೆ. ಹಣವಿಲ್ಲದಿದ್ದರೂ ಬಾಯಲ್ಲಿ ಬುರುಡೆ ಬಿಟ್ಟಿದ್ದಾರೆ. ಈ ಕುರಿತು ಕೂಡ ಸದನದಲ್ಲಿ ಚರ್ಚೆ ಮಾಡಿದ್ದೇವೆ. ಗೃಹಲಕ್ಷ್ಮಿಯ 5,000 ಕೋಟಿ ರೂ., ಅನ್ನಭಾಗ್ಯದ 700 ಕೋಟಿ ರೂ. ಹೀಗೆ ಅನೇಕ ಯೋಜನೆಗಳಲ್ಲಿ ನುಂಗಿ ಹಾಕಿದ ಹಣದ ಬಗ್ಗೆ ಪ್ರಶ್ನೆ ಮಾಡಿದ್ದೇವೆ. ಆದರೆ ಈ ಬಗ್ಗೆ ಸಿಎಂ ಹಾಗೂ ಸಚಿವರು ಸರಿಯಾದ ಉತ್ತರ ನೀಡಿಲ್ಲ ಎಂದು ಅಶೋಕ್ ಟೀಕಿಸಿದರು.
ಮೆಟ್ರೊ ಯೋಜನೆ ಸಂಬಂಧ ಸಂಸದ ಪಿ.ಸಿ.ಮೋಹನ್ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಯಲ್ಲಿ ಉತ್ತರ ಬಂದಿದೆ. ಕೇಂದ್ರ ಕೇವಲ 12% ಪಾಲು ನೀಡಿದೆ ಎಂದು ರಾಜ್ಯ ಸರ್ಕಾರ ಉತ್ತರ ನೀಡಿದೆ. ಆದರೆ ವಾಸ್ತವದಲ್ಲಿ 50-50 ಪಾಲಿನಲ್ಲಿ ಅನುದಾನ ಹಂಚಿಕೆಯಾಗುತ್ತಿದೆ. ಸಂಪೂರ್ಣವಾಗಿ ಮೆಟ್ರೊ ಹೊಣೆಯನ್ನು ರಾಜ್ಯ ಸರ್ಕಾರಕ್ಕೆ ನೀಡಿಲ್ಲ. ಹಾಗೆ ಹೊಣೆ ನೀಡಿದರೆ ಜನರು ಟಿಪ್ಪರ್ನಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.
ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯದ ವೇಳೆ ಸರ್ಕಾರ ಸರಿಯಾದ ಭದ್ರತೆಯನ್ನು ಕಲ್ಪಿಸಬೇಕು,ಈ ಹಿಂದೆ ಪೊಲೀಸ್ ಭದ್ರತೆ ನೀಡದೆಯೇ, ಸಚಿವರ ಕುಟುಂಬದವರು ಫೋಟೋ ಶೂಟ್ ಮಾಡಿಕೊಂಡು 11 ಅಮಾಯಕರ ಸಾವಾಗಿತ್ತು. ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸಬೇಕು ಒಂದು ವೇಳೆ ಏನಾದರೂ ಅನಾಹುತವಾದರೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಅಶೋಕ್ ಹೇಳಿದರು.
