ಮೈಸೂರು: ಮೈಸೂರು ದಸರಾ ಮಹೋತ್ಸವ-2026ರ ಅಂಗವಾಗಿ ಅ.11 ರಿಂದ 20ರವರೆಗೆ ಮೈಸೂರು ದಸರಾ ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳವನ್ನು ನಗರದ ಭಾರತ್ ಸೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಲಾಗಿದೆ.
ಪುಸ್ತಕ ಮೇಳವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರು ಉದ್ಘಾಟಿಸುವರು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ ಅವರು ಹೇಳಿದರು.
ನಗರದ ಕಲಾಮಂದಿರ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪುಸ್ತಕ ಮೇಳದಲ್ಲಿ ಸುಮಾರು 70 ಪ್ರಕಾಶಕರು ಭಾಗವಹಿಸಲಿದ್ದು, 90 ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರತೀ ದಿನ ಬೆಳಿಗ್ಗೆ ಹೊಸ ಪುಸ್ತಕಗಳ ಬಿಡುಗಡೆ ಸಮಾರಂಭ ಇರುತ್ತದೆ. ಹಾಗೆಯೇ ಸಂಜೆ ಸೆಲ್ಫಿ ವಿತ್ ಸಾಹಿತಿ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಅ.12 ರಂದು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಮುದ್ರಣವಾಗಿರುವ 12 ಕೃತಿಗಳ ಬಿಡುಗಡೆ ಮಾಡಲಾಗುವುದು. ಅ.13 ರಂದು ಅಮ್ಮ ರಾಮಚಂದ್ರ ಅವರಿಂದ ಭಾವಗೀತೆ ಗಾಯನ, ಅ.14 ರಂದು ಯುವರಾಜ ಕಾಲೇಜು ವಿದ್ಯಾರ್ಥಿಗಳಿಂದ ನನ್ನ ಮೆಚ್ಚಿನ ಪುಸ್ತಕ ಓದು ಕಾರ್ಯಕ್ರಮ, ಅ.15 ರಂದು ಶ್ರೀ ಸಬ್ಬನಹಳ್ಳಿ ರಾಜು ಮತ್ತು ತಂಡದ ವತಿಯಿಂದ ಜನಪದ ಗೀತೆಗಳ ಗಾಯನ, ಅ.16 ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಹಾಗೂ ಕೆ.ಎಸ್.ಎನ್.ಟ್ರಸ್ಟ್ ವತಿಯಿಂದ ಕವಿಗೋಷ್ಠಿ ಮತ್ತು ಕುಂಚ, ಕಾವ್ಯ ಗಾಯನ, ಅ.17 ರಂದು ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ರಂಗಗೀತೆ ಗಾಯನ, ಅ.18 ರಂದು ಚಾಮರಾಜನಗರದ ಶ್ರೀ ನರಸಿಂಹಮೂರ್ತಿ ಸಿ.ಎಂ. ಮತ್ತು ಬಸವರಾಜು ಬಿ. ತಂಡದ ವತಿಯಿಂದ ಕನಕ ಕೀರ್ತನೆ – ತತ್ವಪದಗಳು ಹಾಗೂ ಅ.19 ರಂದು ತುಮಕೂರಿನ ಶ್ರೀ ಎ.ಎನ್. ತಿಮ್ಮಯ್ಯ ಅವರಿಂದ ದೇವಿ ಮಹಾತ್ಮೆ ಮೂಡಲಪಾಯ ಯಕ್ಷಗಾನ ಪ್ರಸಂಗ ನಡೆಯಲಿದೆ ಎಂದು ತಿಳಿಸಿದರು.
ಕಳೆದ ಬಾರಿಯಂತೆ ಈ ಬಾರಿಯೂ ಪುಸ್ತಕ ರಥದ ಮೂಲಕ ಪುಸ್ತಕ ಮೇಳಕ್ಕೆ ಪ್ರಚಾರ ನೀಡಲಾಗುವುದು. ಪುಸ್ತಕ ಮೇಳದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಸಾಂಸ್ಕೃತಿಕ ವೇದಿಕೆ ಎಂದು ಹೆಸರಿಡಲಾಗಿದೆ. ಅಲ್ಲದೆ ಇತ್ತೀಚೆಗೆ ನಮ್ಮನ್ನು ಅಗಲಿದ ಖ್ಯಾತ ಕಾದಂಬರಿಗಾರ್ತಿ ಸಿ.ಎನ್. ಮುಕ್ತಾ ಹಾಗೂ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದು ಇತ್ತೀಚೆಗೆ ನಮ್ಮನಗಲಿದ ಮಡ್ಡಿಕೆರೆ ಗೋಪಾಲ್ ಅವರ ಹೆಸರಿನ ದ್ವಾರಗಳನ್ನು ನಿರ್ಮಿಸಲಾಗುವುದು ಎಂದು ಮಾನಸಾ ತಿಳಿಸಿದರು.
ಪ್ರತೀ ದಿನ ಪುಸ್ತಕ ಮೇಳದಲ್ಲಿ ಕವಿತೆ ವಾಚಿಸಿ ಗಿಡ ಗಿಟ್ಟಿಸಿ ಎಂಬ ಹೊಸ ಕಾರ್ಯಕ್ರಮವನ್ನು ಆಯೋಜಿಸಿದ್ದು, ಆಸಕ್ತ ಕವಿಗಳು ತಮ್ಮ ಕವಿತೆ ಓದಿ-ಒಂದು ಗಿಡ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಇದೇ ವೇಳೆ ದಸರಾ ಪುಸ್ತಕ ಮೇಳದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕಿ ಎಸ್.ನಿರ್ಮಲ ಮಠಪತಿ, ಮೈಸೂರು ಜಿಲ್ಲಾ ಗ್ರಂಥಾಲಯ ಉಪ ನಿರ್ದೇಶಕಿ ಸಮ ಬಿ ಕೋಡಿಹಳ್ಳಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು, ಕನ್ನಡ ಪುಸ್ತಕ ಪ್ರಾಧಿಕಾರ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್, ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಹಾಗೂ ಮಹಾರಾಜ ಕಾಲೇಜು ಪ್ರಾಧ್ಯಾಪಕ ಪರಶುರಾಮ್ ಹಾಜರಿದ್ದರು.
