ಮೈಸೂರು: ಸರ್ವಜನಾಂಗದ ಶಾಂತಿಯ ತೋಟವಾದ ಕರ್ನಾಟಕದಲ್ಲಿ ಪದೇ ಪದೇ ಹಿಂದೂ ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುವ ಪ್ರತಾಪ್ ಸಿಂಹ ಸಿದ್ದರಾಮಯ್ಯ ಅವರಿಗೆ ಸವಾಲ್ ಹಾಕುವುದು ಹಾಸ್ಯಾಸ್ಪದ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯಗೆ ತಾಕತ್ ಇದ್ರೆ ಮೈಸೂರು ಸಿಟಿಯಲ್ಲಿ ಸ್ಪರ್ಧೆ ಮಾಡೋಕೆ ಹೇಳಿ ಎನ್ನುವ ಮಾಜಿ ಸಂಸದರ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಬ್ರಹ್ಮಣ್ಯ, ಸಿದ್ದರಾಮಯ್ಯ ಅವರು ಕರ್ನಾಟಕದ 224 ಕ್ಷೇತ್ರಗಳಲ್ಲಿ ಎಲ್ಲೇ ನಿಂತರೂ, ಜನ ಸ್ವಾಗತಿಸುತ್ತಾರೆ. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದು, ವಿರೋಧಿಗಳ ಕುತಂತ್ರದಿಂದ ಎಂಬುದನ್ನು ಮರೆಯಬೇಡಿ ಎಂದು ಹೇಳಿದರು.
ಅದೇ ಸಮಯ ಉತ್ತರ ಕರ್ನಾಟಕದಲ್ಲಿ ನಿಮ್ಮ ಪಕ್ಷದ ಶಾಸಕರನ್ನೇ ಸೋಲಿಸಿದ್ದು, ಮರೆತುಬಿಟ್ಟಿರಾ ಎಂದು ಟಾಂಗ್ ನೀಡಿದರು.
ಸಿದ್ದರಾಮಯ್ಯ ಅವರು ಚುನಾವಣಾ ರಾಜಕಾರಣದಲ್ಲಿ ಸೋತಿದ್ದಾರೆ, ಆದರೆ ಪಕ್ಷ ಎಂದಿಗೂ ಅವರನ್ನ ಮೂಲೆಗುಂಪು ಮಾಡಿಲ್ಲ, ನೀವು ಮೋದಿ ಬಿಟ್ಟರೆ, ದೇಶದಲ್ಲಿ ನಾನೇ ಅತಿಹೆಚ್ಚು ಕೆಲಸ ಮಾಡಿದ್ದು ಅಂತ ಬೀಗುತ್ತಿದ್ದಿರಿ ಅದಕ್ಕೆ ನಿಮ್ಮನ್ನ ಮೂಲೆಗುಂಪು ಮಾಡಿದ್ದಾರೆ ಎಂದು ಕುಟುಕಿದರು.
ತಾಯಿ ಹೆಸರಲ್ಲಿ 14 ಸೈಟು ಪಡೆದುಕೊಳ್ಳುವ ಕೆಲಸ ಮಾಡ್ತೀರಲ್ಲ ಅಂತ ಯತೀಂದ್ರ ಅವರನ್ನ ಕೇಳುತ್ತಿದ್ದೀರಿ. ಸಿದ್ದರಾಮ್ಯಯ ಕುಟುಂಬ ಮುಡಾ ಸೈಟು ಪ್ರಕರಣದಲ್ಲಿ ಕಳಂಕಮುಕ್ತವಾಗಿದೆ. ಆದರೆ ನೀವು ಜೀವನದಲ್ಲಿ ಅಳಿಸಲಾಗದ ಕಳಂಕ ಹೊತ್ತಿದ್ದೀರಿ,ಹೆಂಡತಿಯನ್ನ ತಂಗಿ ಅಂತ ಹೇಳಿ ಸೈಟು ಪಡೆಯುವ ಕೆಲಸವನ್ನ ಯತೀಂದ್ರ ಅವರು ಮಾಡಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಕೋವಿಡ್ ಸಮಯದಲ್ಲಿ ಮೈಸೂರಿನಲ್ಲಿ ಮಹಿಳಾ ಜಿಲ್ಲಾಧಿಕಾರಿಗಳು ಸ್ಟೆಪ್ಡೌನ್ ಆಸ್ಪತ್ರೆಗಳಲ್ಲಿ ನೀವು ಮಾಡುತ್ತಿದ್ದ ಅಕ್ರಮಗಳಿಗೆ ಬ್ರೇಕ್ ಹಾಕಿದಾಗ, ಅವರ ವಿರುದ್ಧ ತಿರುಗಿ ಬಿದ್ದಿರಿ, ಎಲ್ಲರನ್ನ ಅವರ ವಿರುದ್ಧ ಎತ್ತಿಕಟ್ಟಿದಿರಿ, ಈ ಕೆಲಸ ಯತೀಂದ್ರ ಅವರು ಮಾಡಲಿಲ್ಲ. ದಶಪಥ ಹೆದ್ದಾರಿ ನಾನು ಮಾಡಿಸಿದ್ದು ಅಂತೀರಿ, ಅದ್ರಲ್ಲಿ ಎಷ್ಟು ಕೋಟಿ ನೀವು ಹೊಡೆದ್ರಿ ಒಂದು ರೂಪಾಯಿ ಹೊಡೆಯದೇ ಕೆಲಸ ಮಾಡಿದ್ದೀರಾ ಎಂದು ಸುಬ್ರಹ್ಮಣ್ಯ ಪ್ರಶ್ನಿಸಿದ್ದಾರೆ.
ಆದರೂ ಈ ಹೆದ್ದಾರಿ ಮೈಸೂರಿಗೆ ಬರೋದು ಸುಮಾರು 5 ಕಿಮೀ ಮಾತ್ರ. ಮಂಡ್ಯದಲ್ಲಿ ಸುಮಲತಾ ಅವರಿದ್ರು, ರಾಮನಗರದಲ್ಲಿ ಡಿ.ಕೆ ಸುರೇಶ್ ಅವರಿದ್ರು, ಮಿಕ್ಕಿದ್ದು ಬೆಂಗಳೂರು ವ್ಯಾಪ್ತಿಗೆ ಸೇರುತ್ತದೆ. ಅವರೆಲ್ಲಾ ಸಾತ್ ಕೊಡದೇ ನೀವೊಬ್ಬರೇ ಮಾಡಿಬಿಟ್ರಾ ಈಗ ಮಾಧ್ಯಮಗಳ ಮುಂದೆ ಬಂದು ಸಾಚಾಗಳಂತೆ ಮಾತನಾಡುವುದು ಎಷ್ಟು ಸರಿ ಎಂದು ಕುಟುಕಿದ್ದಾರೆ.
