ವಾಷಿಂಗ್ಟನ್: ಐಸಿಸ್ ಉಗ್ರರ ತಾಣ ಸಿರಿಯಾದ ಮೇಲೆ ಅಮೆರಿಕ ಸೇನೆ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿದೆ.
ಈ ವೇಳೆ 35 ಉಗ್ರ ನೆಲೆಗಳ ಮೇಲೆ ದಾಳಿ ನಡೆದಿದ್ದು ಹಲವರು ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ.
ಕಳೆದ ತಿಂಗಳು ಐಸಿಸ್ ಉಗ್ರರು ಮೂವರು ಅಮೆರಿಕನ್ನರನ್ನು ಹತ್ಯೆ ಮಾಡಿದ ಘಟನೆಗೆ ಪ್ರತಿಯಾಗಿ ಈ ದಾಳಿ ಮಾಡಲಾಗಿದೆ ಎಂದು ಅಮೆರಿಕನ್ ಪಡೆಗಳ ಉಸ್ತುವಾರಿ ಸೆಂಟ್ರಲ್ ಕಮಾಂಡ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ.
ವೈಮಾನಿಕ ದಾಳಿಯಲ್ಲಿ ಬಾಂಬ್ಗಳು ಹಲವು ತಾಣಗಳನ್ನು ಉಡೀಸ್ ಮಾಡಿದ ವಿಡಿಯೋವನ್ನು ಕೂಡಾ ಸೇನೆಯು ಹಂಚಿಕೊಂಡಿದೆ. ಆದರೆ, ಆ ಸ್ಥಳಗಳು ಯಾವ ಪ್ರದೇಶದಲ್ಲಿವೆ ಎಂಬುದರ ಮಾಹಿತಿ ನೀಡಿಲ್ಲ.
ನಾವು ಎಂದಿಗೂ ಆ ದಾಳಿಯನ್ನು ಮರೆಯುವುದಿಲ್ಲ ಮತ್ತು ಉಗ್ರವಾದವನ್ನು ಮಣಿಸಲು ಎಂದಿಗೂ ಹಿಂಜರಿಯುವುದಿಲ್ಲ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ತಿಳಿಸಿದ್ದಾರೆ.
