ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಾರು ಬೇರೊಂದು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹೈದರಾಬಾದ್ ಮೂಲದ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ನಡೆದಿದೆ.
ಈ ಅಪಘಾತದಲ್ಲಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೈದರಾಬಾದ್ನ ಸೈದಾಬಾದ್ ನಿವಾಸಿ ಶೇಖ್ ನವೀದ್ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ನವೀದ್ ಪತ್ನಿ ನಾಜಿಯಾ ಸಲ್ಮಾ, ಅವರ ಪುತ್ರ ಹಾಗೂ ಪುತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನವೀದ್ ಮತ್ತು ಅವರ ಕಿರಿಯ ಪುತ್ರಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶೇಖ್ ನವೀದ್ ಸುಮಾರು 10 ವರ್ಷಗಳ ಹಿಂದೆ ಉದ್ಯೋಗ ನಿಮಿತ್ತ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿಯೇ ಕುಟುಂಬದೊಂದಿಗೆ ನೆಲೆಸಿದ್ದರು.
ಅವರು ಕುಟುಂಬದವರೊಂದಿಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ನವೀದ್ ಅವರ ತಂದೆ ಶೇಖ್ ಅಬ್ದುಲ್ ಸಯೀದ್ ಅವರು ಮಗನಿಗೆ ಕರೆ ಮಾಡಿದ ವೇಳೆ ಅಮೆರಿಕದ ಪೊಲೀಸರು ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ.
