ತುಮಕೂರು: ಸಾವಿರಾರು ವಿದ್ಯಾರ್ಥಿಗಳಿಗೆ ಆಗಿರುವ ಮೋಸ, ಅನ್ಯಾಯದ ವಿರುದ್ಧ ಧನಿ ಎತ್ತಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರನ್ನು ಬಂಧಿಸಿ, ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಕಿಡಿಕಾರಿದರು.
ರಾಹುಲ್ ಗಾಂಧಿ ಅವರ ಧ್ವನಿಯನ್ನು ಅಡಗಿಸುವುದಕ್ಕೆ ಕೇಂದ್ರ ಸರ್ಕಾರ ಈ ಪ್ರಯತ್ನಗಳನ್ನು ಮಾಡುತ್ತಿದೆ. ಯುವಜನತೆಯ ಪರವಾಗಿರುವ ನಮ್ಮ ಧ್ವನಿ, ಪ್ರತಿಭಟನೆ ಹೀಗೆಯೇ ಮುಂದುವರಿಯುತ್ತದೆ ಎಂದು ಅವರು ತಿಳಿಸಿದರು.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಮೋದಿಯವರು ರಾಜೀನಾಮೆ ನೀಡಬೇಕು ಎಂಬುದಾಗಿ ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಅಧಿಕಾರದಲ್ಲಿರುವವರು ತಪ್ಪು ಮಾಡಿರುವಾಗ ಸ್ವಾಭಾವಿಕವಾಗಿ ರಾಜೀನಾಮೆ ಕೇಳಬೇಕು. ಧರ್ಮೇಂದ್ರ ಪ್ರಧಾನ್ ಅವರು ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ರೈಲ್ವೆ ಅಪಘಾತದಂತಹ ಸಂದರ್ಭಗಳಲ್ಲಿ ಕೇಂದ್ರದ ಸಚಿವರುಗಳು ರಾಜೀನಾಮೆ ಕೊಟ್ಟಿದ್ದಾರೆ ಎಂದು ಡಿಸಿಎಂ ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಕುರಿತ ಮಾಧ್ಯಮದ ಪ್ರಶ್ನೆಗೆ, ನಮ್ಮ ನಾಯಕರು ದೆಹಲಿಗೆ ಹೋಗಿದ್ದಾರೆ. ವರಿಷ್ಠರ ಜೊತೆ ಚರ್ಚಿಸಿ ನಿರ್ಧರಿಸುತ್ತಾರೆ. ಅವರ ಅನುಮತಿಯ ಮೇರೆಗೆ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎಂದು ಉತ್ತರಿಸಿದರು.
ತುಮಕೂರಿಗೆ ಮತ್ತೊಂದು ಸಚಿವ ಸ್ಥಾನ ಸಿಗಬೇಕು ಎಂಬ ಬೇಡಿಕೆ ಇದೆಯಲ್ಲ ಎಂಬ ಇನ್ನೊಂದು ಪ್ರಶ್ನೆಗೆ, ತುಮಕೂರು ದೊಡ್ಡ ಜಿಲ್ಲೆ. ಹಾಗಾಗಿ ಮತ್ತೊಂದು ಸಚಿವ ಸ್ಥಾನ ಕೊಡಬೇಕು ಎಂದು ನಾನು ಕೂಡ ಮನವಿ ಮಾಡಿದ್ದೇನೆ ಎಂದು ಪರಮೇಶ್ವರ್ ತಿಳಿಸಿದರು.
ಬರದ ಛಾಯೆ ಬಹಳ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಅದಕ್ಕೆ ಕೇಂದ್ರ ಸರ್ಕಾರಕ್ಕೂ ಕೂಡ ನೆರವು ನೀಡುವಂತೆ ಕೋರಿದ್ದೇವೆ. ಬರ ಘೋಷಣೆಯ ನಿಯಮಗಳನ್ನು ಸಡಿಲ ಮಾಡುವಂತೆ ಮನವಿ ಮಾಡಿದ್ದೇವೆ. ಈ ಬಗ್ಗೆ ನಾನು ಮತ್ತು ಮುಖ್ಯಮಂತ್ರಿಗಳು ಪತ್ರವನ್ನೂ ಬರೆದಿದ್ದೇವೆ. ಆದರೆ ಅವರಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬೇಸರ ಪಟ್ಟರು.
