ಮೈಸೂರು: ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಸೇವೆಗಳಿಗೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕರು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದು,ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಪ್ರಜ್ಞಾವಂತ ನಾಗರಿಕ ವೇದಿಕೆ ಆಗ್ರಹಿಸಿದೆ.
ಹೊಸದಾಗಿ ಆಧಾರ್ ಕಾರ್ಡ್ ಮಾಡಿಸುವುದು, ಕಾರ್ಡ್ನಲ್ಲಿರುವ ತಪ್ಪುಗಳನ್ನು ಸರಿಪಡಿಸುವುದು ಹಾಗೂ ಆಧಾರ್ಗೆ ಮೊಬೈಲ್ ಸಂಖ್ಯೆ ಜೋಡಿಸುವುದು ಸೇರಿದಂತೆ ವಿವಿಧ ಸೇವೆಗಳನ್ನು ಪಡೆಯಲು ಜನರು ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರಿಗೆ ತ್ವರಿತವಾಗಿ ಹಾಗೂ ಸಕಾಲದಲ್ಲಿ ಸೇವೆ ಒದಗಿಸುವಂತೆ ಒತ್ತಾಯಿಸಿ, ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಸಿದ್ದಾರ್ಥ ಲೇಔಟ್ ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ತಹಶೀಲ್ದಾರರಾದ ರೇಖಾ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ
ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್ ಅವರು,
ಆಧಾರ್ ಸೇವಾ ಕೇಂದ್ರಗಳಲ್ಲಿ ಸಾರ್ವಜನಿಕರ ದಟ್ಟಣೆ ಹೆಚ್ಚಾಗಿರುವುದರಿಂದ ಜನರು ದೀರ್ಘಕಾಲ ಸರದಿಯಲ್ಲಿ ಕಾಯಬೇಕಾಗಿದೆ,ಅದರಲ್ಲೂ ವೃದ್ಧರು ಹಾಗೂ ವಿಶೇಷಚೇತನರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹವರಿಗೆ ಆದ್ಯತೆ ನೀಡುವ ಮೂಲಕ ಸೇವೆ ಒದಗಿಸಬೇಕು. ಜನರ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಸಿಬ್ಬಂದಿ ನೇಮಿಸಿ, ವಿಶೇಷ ಆಧಾರ್ ಸೇವಾ ಘಟಕಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.
ಗ್ರಾಮೀಣ ಭಾಗದ ಜನರು ಸಣ್ಣಪುಟ್ಟ ಆಧಾರ್ ತಿದ್ದುಪಡಿಗಳಿಗಾಗಿ ನಗರ ಪ್ರದೇಶಗಳಿಗೆ ಪದೇಪದೇ ಅಲೆದಾಡುವುದನ್ನು ತಪ್ಪಿಸಲು ಗ್ರಾಮ ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿ ವಿಶೇಷ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರಗಳನ್ನು ಆಯೋಜಿಸಬೇಕು. ಇದರಿಂದ ಗ್ರಾಮೀಣ ಜನರಿಗೆ ಸಮಯ ಮತ್ತು ಹಣದ ಉಳಿತಾಯವಾಗುವುದರ ಜತೆಗೆ ಅನಗತ್ಯ ಅಲೆದಾಟವೂ ತಪ್ಪಲಿದೆ.
ಸಾರ್ವಜನಿಕರಿಗೆ ಅಗತ್ಯವಾದ ಆಧಾರ್ ಸೇವೆಗಳು ವಿಳಂಬವಿಲ್ಲದೆ ಸುಲಭವಾಗಿ ಲಭ್ಯವಾಗುವಂತೆ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಆಧಾರ್ ಸೇವಾ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು
ಈ ಸಂದರ್ಭದಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆಯ ದೂರ ರಾಜಣ್ಣ, ಜಯಸಿಂಹ ಶ್ರೀಧರ್, ಗಗನ್ ಗೌಡ, ದಯಾನಂದ ನಾಯಕ್, ಶ್ರೀಕಂಠ ಕೌಶಿಕ್, ಪ್ರಜ್ವಲ್ ಪೆಮ್ಮಯ್ಯ, ಶ್ರೀಕಾಂತ್ ಕಶ್ಯಪ್, ಜತ್ತಿ ಪ್ರಸಾದ್, ನಿವೃತ್ತ ಶಿಕ್ಷಕ ಮಹದೇವಸ್ವಾಮಿ ಮತ್ತಿತರರು ಹಾಜರಿದ್ದರು.
