ಬೆಂಗಳೂರು: ರಾಜ್ಯದ ಪ್ರತಿಯೊಂದು ನಗರ ಪ್ರದೇಶದಲ್ಲೂ ತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಕೈಗೊಳ್ಳಲು ದಾವಣಗೆರೆ ಮಾದರಿಯನ್ನು ಅನುಸರಿಸುವಂತೆ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮನೆ ಮನೆಗಳಲ್ಲೇ ಶೇಕಡಾ 100 ರಷ್ಟು ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಅವರು ಸೂಚಿಸಿದರು.
ಇಂದು ಸಚಿವರ ಗೃಹ ಕಛೇರಿ ‘ಕಾವೇರಿ’ಯಲ್ಲಿ ನಡೆದ ಸ್ವಚ್ಛ ಭಾರತ ಮಿಷನ್ 2.0 (SBM 2.0) ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯತೀಂದ್ರ ಮಾತನಾಡಿದರು.
ದಾವಣಗೆರೆ ನಗರದಲ್ಲಿ ಶೇಕಡಾ 100 ರಷ್ಟು ಕಸ ವಿಂಗಡಣೆ ಯಶಸ್ವಿಯಾಗಿ ನಡೆಯುತ್ತಿದೆ ಸಾರ್ವಜನಿಕರು ಮನೆಗಳಲ್ಲೇ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ ನೀಡುತ್ತಿದ್ದಾರೆ. ದಾವಣಗೆರೆಯಲ್ಲಿ ಇದು ಸಾಧ್ಯವಾಗುತ್ತದೆ ಎಂದಾದರೆ, ರಾಜ್ಯದ ಇತರೆ ನಗರಗಳಲ್ಲಿ ಏಕೆ ಸಾಧ್ಯವಿಲ್ಲ? ಪ್ರತಿಯೊಂದು ನಗರದಲ್ಲೂ ಈ ಮಾದರಿಯನ್ನು ತಕ್ಷಣದಿಂದಲೇ ಜಾರಿಗೆ ತರಬೇಕು ಎಂದು ಸಚಿವರು ಆದೇಶಿಸಿದರು.
ನಗರಗಳಲ್ಲಿ ವರ್ಷಗಳಿಂದ ಬಿದ್ದಿರುವ ಹಳೆಯ ‘ಲೆಗಸಿ ವೇಸ್ಟ್’ ವಿಲೇವಾರಿ ಮಾಡುವುದು ಎಷ್ಟು ಮುಖ್ಯವೋ, ಪ್ರತಿದಿನ ಹೊಸದಾಗಿ ಸಂಗ್ರಹವಾಗುವ ಕಸವು ವಿಂಗಡಣೆಯಾಗದೆ ಮತ್ತೆ ಕಸದ ರಾಶಿಯಾಗಿ ಮಾರ್ಪಡಾಗದಂತೆ ತಡೆಯುವುದು ಅಷ್ಟೇ ಮುಖ್ಯ. ಇದಕ್ಕಾಗಿ ಶೇ 100 ರಷ್ಟು ಮೂಲದಲ್ಲೇ ವಿಂಗಡಣೆ ಹಾಗೂ ಸಂಸ್ಕರಣಾ ಸಾಮರ್ಥ್ಯವನ್ನು ತುರ್ತಾಗಿ ಹೆಚ್ಚಿಸಬೇಕು ಎಂದು ಸಚಿವರು ಹೇಳಿದರು.
ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ತಂತ್ರಜ್ಞಾನ ಮತ್ತು ಯೋಜನೆಗಳ ಸಾಧ್ಯತೆಗಳನ್ನು ವಿಸ್ತೃತವಾಗಿ ಪರಿಶೀಲಿಸಬೇಕು. ಪ್ರಸ್ತುತ ಬಿಡದಿಯಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಯೋಜನೆ ಮಾದರಿಯಲ್ಲೇ, ಮುಂದಿನ ಹಂತಗಳಲ್ಲಿ ಇತರೆ ದೊಡ್ಡ ನಗರಗಳಿಗೂ ಇದನ್ನು ವಿಸ್ತರಿಸುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಸ್ವಚ್ಛ ಭಾರತ್ ಮಿಷನ್ ನ ರಾಜ್ಯ ಅಭಿಯಾನ ನಿರ್ದೇಶಕರಾದ ಡಾ. ಆರ್. ಸೆಲ್ವಮಣಿ ಅವರು ಎಸ್.ಬಿ.ಎಂ-2.0 ಅಡಿಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣಾ ಯೋಜನೆಗಳ ವಿವರ ಒದಗಿಸಿದರು.
ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಎನ್.ಜಿ.ಟಿ ಹಾಗೂ ಸುಪ್ರೀಂ ಕೋರ್ಟ್ ಕಾಲ ಕಾಲಕ್ಕೆ ಪರಿಶೀಲನೆ ನಡೆಸುತ್ತವೆ ಎಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಬಿ.ಬಿ. ಕಾವೇರಿ ಅವರು ತಿಳಿಸಿದರು.
ತ್ಯಾಜ್ಯ ನಿರ್ವಹಣೆ ಹಾಗೂ ನೈರ್ಮಲ್ಯ ಯೋಜನೆಗಳಲ್ಲಿ ಯಾವುದೇ ನೆಪಗಳನ್ನು ಸಹಿಸುವುದಿಲ್ಲ ಎಂದ ಸಚಿವ ಯತೀಂದ್ರ, ಅನುದಾನ ಮತ್ತು ಜಾಗದ ಸಮಸ್ಯೆಗಳನ್ನು ಸ್ಥಳೀಯವಾಗಿ ಬಗೆಹರಿಸಿಕೊಂಡು, ನಿಗದಿತ ಕಾಲಮಿತಿಯೊಳಗೆ ಬಾಕಿ ಇರುವ ಎಲ್ಲಾ ಶೌಚಾಲಯ ಘಟಕ ಹಾಗೂ ತ್ಯಾಜ್ಯ ಸಂಸ್ಕರಣಾ ಘಟಕಗಳ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಕಡಕ್ ಸೂಚನೆ ನೀಡಿದರು.
