ಬೆಂಗಳೂರು: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಕುಟುಂಬದ ಒಡೆತನಕ್ಕೆ ಸೇರಿದ ಕೆಂಗೇರಿಯ ಜ್ಞಾನಮಿತ್ರ ಎನ್ಪಿಎಸ್ ಶಾಲೆಯು ಸರ್ಕಾರಿ ಶಿಕ್ಷಣ ಇಲಾಖೆಯ ಜಾಗವನ್ನು ಕಬಳಿಸಲು ಯತ್ನಿಸುತ್ತಿದೆ ಎಂಬ ಗಂಭೀರ ಆರೋಪಗಳು
ಕೇಳಿಬಂದಿದೆ.
ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿರುವ ಈ ಆರೋಪಗಳು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಸರ್ಕಾರಿ ಪ್ರಥಮ ಪದವಿ ಪೂರ್ವ ಕಾಲೇಜಿನ ಕಟ್ಟಡವನ್ನು ನೆಲಸಮಗೊಳಿಸಿರುವ ಘಟನೆ ಶಿಕ್ಷಣ ಕ್ಷೇತ್ರದ ಮೇಲೆ ನಡೆಸಿರುವ ಬಹಿರಂಗ ದಾಳಿಯಾಗಿದೆ ಎಂದು ಆಮ್ ಆದ್ಮಿ ಪಕ್ಷ ಕಿಡಿಕಾರಿದೆ.
ಈ ಜಾಗದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರದಿಂದ ಸುಮಾರು 65 ಲಕ್ಷ ರೂ ಅನುದಾನ ಮಂಜೂರಾಗಿದ್ದು, ಕಾಮಗಾರಿಯೂ ಪ್ರಗತಿಯಲ್ಲಿತ್ತು,ಆದರೆ ಇಂತಹ ಸಂದರ್ಭದಲ್ಲೇ ಸರ್ಕಾರಿ ಶಿಕ್ಷಣ ಇಲಾಖೆಯ ಜಾಗವನ್ನು ಖಾಸಗಿ ಶಿಕ್ಷಣ ಸಂಸ್ಥೆಗೆ ಅನುಕೂಲವಾಗುವ ರೀತಿಯಲ್ಲಿ ಬಳಸಿಕೊಳ್ಳಲು ಅವಕಾಶ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಶಶಿಧರ್ ಆರಾಧ್ಯ ಹೇಳಿದ್ದಾರೆ.
ಶಶಿಧರ್ ಆರಾಧ್ಯ ಅವರು ಹಲವು ದಿನಗಳ ಹಿಂದೆಯೇ ಈ ಅಕ್ರಮಗಳ ಕುರಿತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಪೊಲೀಸ್ ಇಲಾಖೆಗೆ ಲಿಖಿತ ದೂರು ಸಲ್ಲಿಸಿದ್ದು, ಕರ್ನಾಟಕ ಲೋಕಾಯುಕ್ತದಲ್ಲೂ ಸಹ ದೂರು ದಾಖಲಿಸಿದ್ದಾರೆ.
ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ವಿಷಯವನ್ನು ತಂದಿದ್ದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ,ಈ ನಡುವೆ ಸರ್ಕಾರಿ ಶಿಕ್ಷಣ ಸಂಸ್ಥೆಯ ಆಸ್ತಿಯ ಮೇಲೆ ಏಕಾಏಕಿ ನಡೆಯುತ್ತಿರುವ ಈ ಬೆಳವಣಿಗೆಗಳು ಅಧಿಕಾರ ದುರ್ಬಳಕೆ ಮತ್ತು ರಾಜಕೀಯ ಪ್ರಭಾವದ ಸ್ಪಷ್ಟ ಉದಾಹರಣೆಯಾಗಿದೆ ಎಂದು ಶಶಿಧರ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶಶಿಧರ್ ಆರಾಧ್ಯ ಒಬ್ಬ ಕೇಂದ್ರ ಸಚಿವರ ಕುಟುಂಬದ ಶಿಕ್ಷಣ ಸಂಸ್ಥೆಗೆ ಅನುಕೂಲ ಕಲ್ಪಿಸಲು ಸರ್ಕಾರಿ ಶಿಕ್ಷಣ ಸಂಸ್ಥೆಯ ಕಟ್ಟಡಗಳನ್ನು ಧ್ವಂಸಗೊಳಿಸಲಾಗುತ್ತಿದೆ,ಆದರೆ ರಾಜ್ಯ ಸರ್ಕಾರ ಹಾಗೂ ಬಿಡಿಎ ಅಧಿಕಾರಿಗಳು ಮೌನ ವಹಿಸಿರುವುದು ಅತ್ಯಂತ ಖಂಡನೀಯ ಎಂದು ತಿಳಿಸಿದರು.
ಸಾಮಾನ್ಯ ನಾಗರಿಕರು ಸರ್ಕಾರಿ ಜಾಗದ ಒಂದು ಇಂಚನ್ನಾದರೂ ಅತಿಕ್ರಮಿಸಿದರೆ ತಕ್ಷಣ ಕ್ರಮ ಕೈಗೊಳ್ಳುವ ಸರ್ಕಾರ, ಅಧಿಕಾರದಲ್ಲಿರುವ ರಾಜಕಾರಣಿಗಳ ಕುಟುಂಬದ ವಿರುದ್ಧ ಮಾತ್ರ ಮೌನವಾಗಿರುವುದು ಎರಡು ಬಗೆಯ ನ್ಯಾಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳನ್ನು ಉಳಿಸಿ ಬೆಳೆಸಬೇಕಾದ ಸರ್ಕಾರವೇ ಅವುಗಳ ಜಾಗವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಲು ಅವಕಾಶ ನೀಡುತ್ತಿರುವುದು ಶಿಕ್ಷಣದ ಖಾಸಗೀಕರಣದ ಅಪಾಯಕಾರಿ ಮುಖವಾಗಿದೆ. ಇದು ಕೇವಲ ಒಂದು ಕಾಲೇಜಿನ ವಿಚಾರವಲ್ಲ, ಕರ್ನಾಟಕದ ಸರ್ಕಾರಿ ಶಿಕ್ಷಣ ವ್ಯವಸ್ಥೆಯ ಮೇಲಿನ ಸಂಘಟಿತ ದಾಳಿಯಾಗಿದೆ ಎಂದು ಶಶಿಧರ್ ಆರಾಧ್ಯ ಕಿಡಿಕಾರಿದರು.
ಸರ್ಕಾರಿ ಶಿಕ್ಷಣ ಇಲಾಖೆಯ ಜಾಗದ ಅತಿಕ್ರಮಣ ಹಾಗೂ ಕಟ್ಟಡ ಧ್ವಂಸ ಪ್ರಕರಣದ ಕುರಿತು ಉನ್ನತ ಮಟ್ಟದ ನ್ಯಾಯಾಂಗ ತನಿಖೆ ಅಥವಾ ಲೋಕಾಯುಕ್ತ ತನಿಖೆಗೆ ಕೂಡಲೇ ಆದೇಶಿಸಬೇಕು.
ಜ್ಞಾನಮಿತ್ರ ಎನ್ಪಿಎಸ್ ಶಾಲೆಗೆ ಸರ್ಕಾರಿ ಜಾಗವನ್ನು ಹಸ್ತಾಂತರಿಸಲು ಅಥವಾ ಅತಿಕ್ರಮಣಕ್ಕೆ ಅವಕಾಶ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಿಡಿಎ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಪಾತ್ರವನ್ನು ತನಿಖೆಗೆ ಒಳಪಡಿಸಬೇಕು.
ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ಕೇಂದ್ರ ಸಚಿವ ವಿ. ಸೋಮಣ್ಣ ಅವರನ್ನು ಕೇಂದ್ರ ಸಂಪುಟದಿಂದ ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸಚಿವರ ಕುಟುಂಬಕ್ಕೆ ಸೇರಿದ ಸಂಸ್ಥೆಯ ಪರವಾಗಿ ಸರ್ಕಾರಿ ಶಿಕ್ಷಣ ಸಂಸ್ಥೆಯ ಆಸ್ತಿಯನ್ನು ಕಬಳಿಸುವ ಪ್ರಯತ್ನ ನಡೆದಿದ್ದರೆ, ಅದು ಕೇವಲ ಅಕ್ರಮವಲ್ಲ, ಸಂವಿಧಾನದ ಸಮಾನತೆಯ ತತ್ವಕ್ಕೆ ಮಾಡಿದ ಅವಮಾನವಾಗಿದೆ. ಸರ್ಕಾರಿ ಶಿಕ್ಷಣವನ್ನು ಉಳಿಸುವ ಹೋರಾಟದಲ್ಲಿ ಆಮ್ ಆದ್ಮಿ ಪಕ್ಷ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗುವವರೆಗೆ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಶಶಿಧರ್ ಎಚ್ಚರಿಕೆ ನೀಡಿದ್ದಾರೆ.
