ಮೈಸೂರು: ಮೈಸೂರಿನ ಆರ್ ಟಿ ಐ ಕಾರ್ಯಕರ್ತ ಸ್ಟೀಫನ್ ಸುಜೀತ್ ಅವರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಪೊಲೀಸ್ ಅಧಿಕಾರಿಗಳಲ್ಲಿ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಮನವಿ ಮಾಡಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 45ರ ವ್ಯಾಪ್ತಿಯ ಶಾರದಾದೇವಿನಗರ 2ನೇ ಮುಖ್ಯರಸ್ತೆ ಕೊನೆಯಲ್ಲಿ ಹಂಚಿಕೆಯಾಗದೆ ಉಳಿದಿರುವ ಕಾರ್ನರ್ ಸೈಟ್ ಹಾಗೂ ಅದರೊಳಗೆ ನಿರ್ಮಿಸಲಾಗಿರುವ ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಅಧಿಕೃತ ಮಾಹಿತಿ ಕೋರಿ ಜೈ ಸ್ಟೀಫನ್ ಸುಜಿತ್ ಅವರು ಮಾಹಿತಿ ಹಕ್ಕು ಅಧಿನಿಯಮ ಅಡಿ ಮೈಸೂರು ನಗರ ಪಾಲಿಕೆ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದಾರೆ,ಆದರೆ ಇದರ ಬೆನ್ನಲ್ಲೇ ಅವರ ಮೇಲೆ ಬಿ ಜೆ ಪಿ ಮುಖಂಡ ಬಿ ಎಂ ರಘು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ ಎಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ದೂರಿದ್ದಾರೆ.
ಆರ್.ಟಿ.ಐ. ಕಾರ್ಯಕರ್ತ ಸ್ಟೀಫನ್ ಸುಜಿತ್ ಈ ಸಂಬಂಧ ಕೆಲ ದಿನಗಳ ಹಿಂದೆ ಮಾಧ್ಯಮಗಳ ಜತೆ ಮಾತನಾಡಿ, ಬಿಜೆಪಿ ಕಾರ್ಯಕರ್ತ ಬಿ.ಎಂ.ರಘು ಎಂಬಾತ ಈ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಿಸುತ್ತಿದ್ದಾರೆಂದು ಆರೋಪಿಸಿದ್ದರು.
ನಗರ ಪಾಲಿಕೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟುತ್ತಿರುವ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ದೂರು ಸಹ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸ್ಟೀಫನ್ ಸುಜಿತ್ ಅವರ ಮೇಲೆ ಬಿಜೆಪಿ ಕಾರ್ಯಕರ್ತ ರಘು ಹಾಗೂ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಘಟನೆಯಿಂದ ಸ್ಟೀಫನ್ ಅವರ ಮೂಗಿನ ಮೂಳೆ ಮುರಿದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರ ಪೋಲಿಸ್ ಇಲಾಖೆಯು ಆರ್ ಟಿ ಐ ಕಾರ್ಯಕರ್ತರಿಗೆ ಸೂಕ್ತ ಭದ್ರತೆ ನೀಡಬೇಕು ಮತ್ತು ಸ್ಟೀಫನ್ ಸುಜೀತ್ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ತೇಜಸ್ವಿ ಕೋರಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಬಿಜೆಪಿ ಮುಖಂಡರಾದ ರಘು ತೊಂದರೆ ನೀಡುತ್ತಿದ್ದಾರೆ ಎಂದು ಸುಜೀತ್ ತಿಳಿಸಿದ್ದರೂ ಕೂಡ ಸ್ಥಳೀಯ ಪೋಲಿಸರು ಕ್ರಮ ಕೈಗೊಳ್ಳಲಿಲ್ಲ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಕೂಡಲೇ ಪೋಲಿಸ್ ಇಲಾಖೆ ಬಿ.ಎಂ.ರಘು ಅವರನ್ನು ಬಂಧಿಸಬೇಕು ಮತ್ತು ನಗರ ಬಿಜೆಪಿ ಅಧ್ಯಕ್ಷರು ಬಿ ಎಂ ರಘು ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ತೇಜಸ್ವಿ ಆಗ್ರಹಿಸಿದ್ದಾರೆ.
ಈ ಕುರಿತು ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ,ವೈ, ವಿಜಯೇಂದ್ರ ಅವರಿಗೆ ಪತ್ರ ಬರೆಯುವುದಾಗಿ ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆ.
ಸ್ಥಳೀಯ ಕಾಂಗ್ರೆಸ್ ಮುಖಂಡ ಹಾಗೂ ಆರ್.ಟಿ.ಐ. ಕಾರ್ಯಕರ್ತ ಸ್ಟೀಫನ್ ಸುಜಿತ್, ಶಾರದಾ ಅಪಾರ್ಟ್ಮೆಂಟ್ ಎದುರು ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಸಂಸ್ಥೆಯ ಟ್ರಾನ್ಸ್ಫಾರ್ಮರ್ ಪಕ್ಕದಲ್ಲಿರುವ ಕಾರ್ನರ್ ಸೈಟ್ ಯಾವ ಉದ್ದೇಶಕ್ಕಾಗಿ ಮೀಸಲಾಗಿತ್ತು ಎಂಬುದರ ಕುರಿತು ಅಧಿಕೃತ ಮಾಹಿತಿಯನ್ನು ನೀಡುವಂತೆ ಆರ್.ಟಿ.ಐ ಮೂಲಕ ಮಾಹಿತಿ ಕೋರಿದ್ದರು.
ಜತೆಗೆ ಆ ಸೈಟ್ಗೆ ಸಂಬಂಧಿಸಿದ ಅನುಮೋದಿತ ಲೇಔಟ್ ಪ್ಲಾನ್, ಸೈಟ್ನ ನಿಖರ ಅಳತೆ, ಒಟ್ಟು ವಿಸ್ತೀರ್ಣ, ಸೈಟ್ ಸಂಖ್ಯೆ ಹಾಗೂ ಸರ್ಕಾರಿ ದಾಖಲೆಗಳಲ್ಲಿ ಇರುವ ವಿವರಗಳನ್ನು ಒದಗಿಸುವಂತೆ ಮನವಿ ಮಾಡಿದ್ದರು.
ಸೈಟ್ನ ಪ್ರಸ್ತುತ ಮಾಲೀಕತ್ವ ಯಾರ ಬಳಿಯಿದೆ? ಅದು ಮೈಸೂರು ನಗರ ಪಾಲಿಕೆಯ ವಶದಲ್ಲಿದೆಯೇ ಅಥವಾ ಬೇರೆ ಯಾವುದೇ ಸರ್ಕಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ನಗರ ಪಾಲಿಕೆ ಆಯುಕ್ತರಾದ ಸವಿತಾ ಅವರಿಗೆ ಸಲ್ಲಿಸಿದ ಅರ್ಜಿಯಲ್ಲಿ ಮಾಹಿತಿ ಕೇಳಿದ್ದರು.
ಯಾವುದೇ ವ್ಯಕ್ತಿ, ಸಂಘಟನೆ ಅಥವಾ ರಾಜಕೀಯ ಪಕ್ಷಕ್ಕೆ ಈ ಸೈಟ್ ಅನ್ನು ಹಂಚಿಕೆ ಮಾಡಲಾಗಿದೆಯೇ ಎಂಬ ಮಾಹಿತಿಯೊಂದಿಗೆ, ಹಂಚಿಕೆ ಮಾಡಿದ್ದರೆ ಸಂಬಂಧಿತ ಆದೇಶಗಳ ಪ್ರತಿಗಳನ್ನು ನೀಡುವಂತೆಯೂ ಮನವಿ ಮಾಡಿದ್ದರು ಎಂದು ತೇಜಸ್ವಿ ಮಾಹಿತಿ ನೀಡಿದ್ದಾರೆ.
