ಇಲ್ಕಲ್: ಕನ್ನಡ ಜಾನಪದ ಪರಿಷತ್ತಿನ ಇಲ್ಕಲ್ ತಾಲೂಕ ಅಧ್ಯಕ್ಷರು ಹಾಗೂ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಚನ್ನಪ್ಪ ಲೇಕಿಹಾಳ್ ಅವರು ಬೆಳಗ್ಗೆ ತೋಟದಲ್ಲಿ ಹಾವು ಕಡಿದು ಮೃತಪಟ್ಟಿದ್ದಾರೆ.
ಅವರ ಅಗಲಿಕೆಯಿಂದ ಕನ್ನಡ ಜಾನಪದ ಪರಿಷತ್ತಿಗೆ ತುಂಬಲಾರದ ನಷ್ಟ ಉಂಟಾಗಿದೆ. ಒಬ್ಬ ನಿಷ್ಠಾವಂತ ಸಾಹಿತಿ ಹಾಗೂ ಸಂಘಟಕನನ್ನು ಪರಿಷತ್ ಕಳೆದುಕೊಂಡಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರು ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯರಾದ ಡಾ ಜಾನಪದ ಎಸ್ ಬಾಲಾಜಿ ಅವರು ದುಃಖ ವ್ಯಕ್ತ ಪಡಿಸಿದ್ದಾರೆ.
ಚನ್ನಪ್ಪ ಲೇಕಿಹಾಳ್ ಅವರು ಇಲ್ಕಲ್ ತಾಲೂಕಿನಲ್ಲಿ ಕನ್ನಡ ಜಾನಪದ ಪರಿಷತ್ತನ್ನು ಗ್ರಾಮ ಮಟ್ಟದವರೆಗೆ ಸಂಘಟಿಸಿ ಬೆಳೆಸಿದ ಮಹತ್ವದ ಸೇವೆಯನ್ನು ಸಲ್ಲಿಸಿದ್ದಾರೆ, ಇದೇ ರೀತಿ ಮಠದ ಆಶ್ರಯದಲ್ಲಿ ಬೃಹತ್ ಜಾನಪದ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿದ್ದ ಕೀರ್ತಿ ಇವರದ್ದಾಗಿದೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ, ಅವರ ಸ್ಮರಣಾರ್ಥವಾಗಿ ಕನ್ನಡ ಜಾನಪದ ಪರಿಷತ್ ವತಿಯಿಂದ ಪ್ರತಿ ವರ್ಷ ಒಬ್ಬ ಶ್ರೇಷ್ಠ ಜನಪದ ಸಂಘಟಕನಿಗೆ “ಚನ್ನಪ್ಪ ಲೇಕಿಹಾಳ್ ಪ್ರಶಸ್ತಿ” ನೀಡಲು ತೀರ್ಮಾನಿಸಲಾಗಿದೆ ಎಂದು ಡಾ ಬಾಲಾಜಿ ತಿಳಿಸಿದ್ದಾರೆ.
ಇದೇ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ ಮಾತನಾಡಿ,
“ಚನ್ನಪ್ಪ ಲೇಕಿಹಾಳ್ ಅವರು ಕೇವಲ ಸಂಘಟಕ ಮಾತ್ರವಲ್ಲ, ಮೌಲ್ಯಾಧಾರಿತ ವ್ಯಕ್ತಿತ್ವ ಹೊಂದಿದ ನಾಯಕರು. ಇವರ ಅಗಲಿಕೆ ಪರಿಷತ್ ಹಾಗೂ ಕುಟುಂಬಕ್ಕೆ ಅಪಾರ ನಷ್ಟ ಎಂದು ಸಂತಾಪ ಸೂಚಿಸಿದರು.
ಕನ್ನಡ ಜಾನಪದ ಪರಿಷತ್ತಿನ
ವಿಭಾಗೀಯ ಸಂಚಾಲಕ ಡಾ ಆನಂದಪ್ಪ ಜೋಗಿ, ಬಾಗಲಕೋಟೆ ಜಿಲ್ಲಾಧ್ಯಕ್ಷ ಡಿ.ಎಂ. ಸೌಕಾರ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಕೆ.ಸಿ. ಕಾಂತಪ್ಪ, ಜಿಬಿಎ ಘಟಕ ಅಧ್ಯಕ್ಷ ಡಾ ರಿಯಾಸ್ ಪಾಷಾ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಡಾ ರಾಜು ಗುಂಡಾಪುರ ಸೇರಿದಂತೆ ಅನೇಕರು ಚನ್ನಪ್ಪ ಲೇಕಿಹಾಳ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
