(ವರದಿ:ಎಸ್. ಪುಟ್ಟಸ್ವಾಮಿ ಹೊನ್ನೂರು:
ಯಳಂದೂರು)
ಯಳಂದೂರು: ಚಾಮರಾಜನಗರ ಜಿಲ್ಲೆ ಜಾನಪದ ಸಂಪತ್ತಿನ ಭಂಡಾರವಾಗಿದ್ದು ಇದನ್ನು ಪೋಷಿಸುವ ಕೆಲಸವನ್ನು ಇಂದಿನ ಪೀಳಿಗೆ ಮಾಡುವ ಅನಿವಾರ್ಯತೆ ಇದೆ, ಇದನ್ನು ಪರಿಚಯಿಸುವ ಕಾರ್ಯಕ್ರಮಗಳು ಅರ್ಥಪೂರ್ಣವಾಗಿರಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಕರೆ ನೀಡಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರಂಗದೇಗುಲ ಕಲಾ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜಾನಪದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡಿದರು.
ಆದಿ ಮಾನವನ ಕಾಲದಿಂದಲೂ ಒಂದೊಂದು ಸ್ಥಳದಲ್ಲಿ ಒಂದೊಂದು ಸಂಸ್ಕೃತಿ ಬೇರು ಬಿಟ್ಟಿದೆ. ಈ ಸಂಸ್ಕೃತಿ ಆಚಾರ, ವಿಚಾರಗಳು,ಅವರು ಅನುಸರಿಸುತ್ತಿದ್ದ ನೀತಿ ನಿಯಮಗಳು,ಅವರಲ್ಲಿದ್ದ ಕಲೆಗಳೇ ಜಾನಪದ ಕಲೆಗಳಾಗಿವೆ. ಈ ವಿಚಾರದಲ್ಲಿ ನಮ್ಮ ಜಿಲ್ಲೆ ಸಮೃದ್ಧವಾಗಿದೆ ಎಂದು ಬಣ್ಣಿಸಿದರು.
ಇಡೀ ಜಗತ್ತಿನಲ್ಲಿ ಫಿನ್ಲ್ಯಾಂಡ್ನ ಕಲೈವಾಲಾ ಜಾನಪದವನ್ನು ಬಿಟ್ಟರೆ ಎರಡನೇ ಅತಿ ದೊಡ್ಡ ಜಾನಪದ ಕಾವ್ಯ ನಮ್ಮ ಮಲೆಮಹದೇಶ್ವರರ ಕಾವ್ಯವಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಇಲ್ಲಿನ ಮಹದೇಶ್ವರ, ಸಿದ್ಧಪ್ಪಾಜಿ, ರಾಚಪ್ಪಾಜಿ, ಬಿಳಿಗಿರಿರಂಗನಾಥಸ್ವಾಮಿ ಜಾನಪದ ದೇವರಾಗಿದ್ದಾರೆ. ಆಡು ಭಾಷೆಯಲ್ಲಿ ನಿರರ್ಗಳವಾಗಿ ರಾತ್ರಿಪೂರ್ತಿ ಕಥೆ ಹೇಳುವ ಅನೇಕ ಕಲಾವಿದರು ನಮ್ಮ ಜಿಲ್ಲೆಯಲ್ಲಿದ್ದಾರೆ. ಗೀಗಿಪದ, ರಾಗಿಕಲ್ಲುಪದ, ಸೋಬಾನೆ ಪದ ಸೇರಿದಂತೆ ಸಂಗೀತದ ಅನೇಕ ಪ್ರಾಕಾರಗಳನ್ನು ಹೇಳುವ ಕಲಾವಿದರು ನಮ್ಮ ಜಿಲ್ಲೆಯಲ್ಲಿದ್ದು ಇದನ್ನು ಪೋಷಿಸಿ ಬೆಳೆಸುವ ಕೆಲಸವನ್ನು ಇಂದಿನ ಪೀಳಿಗೆ ಮಾಡಬೇಕು ಎಂದು ಎ.ಆರ್.ಕೃಷ್ಣಮೂರ್ತಿ ಸಲಹೆ ನೀಡಿದರು.
ಜಾನಪದ ಇಂದು ಪಾಶ್ಚಾತ್ಯ ಸಂಸ್ಕೃತಿಗೆ ಸಿಲುಕಿ ನಲುಗುತ್ತಿದ್ದು ಇಂತಹ ಕಾರ್ಯಕ್ರಮಗಳ ಮೂಲಕ ಇದಕ್ಕೆ ಕಾಯಲಕ್ಪವನ್ನು ನೀಡುವ, ಯುವ ಪೀಳಿಗೆಗೆ ಇದನ್ನು ಕಲಿಸುವ ಕೆಲಸಗಳು ಹೆಚ್ಚಬೇಕು ಎಂದು ತಿಳಿಸಿದರು.
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಸಾಧಕರು ನಿತ್ಯ ನೂತನವಾಗಿರುತ್ತಾರೆ. ಇವರ ಸಾಧನೆಗೆ ಸ್ಪೂರ್ತಿ ತುಂಬುವ ಕೆಲಸವನ್ನು ಮಾಡಬೇಕು. ನಮ್ಮ ಕಲೆಯನ್ನು ನಮ್ಮ ಸಂಸ್ಕೃತಿಯನ್ನು ಪೋಷಿಸುವ ಕೆಲಸವನ್ನು ಕಲಾವಿದರು ಮಾಡಬೇಕು. ಸಾಂಸ್ಕೃತಿಕ ಹುಡುಕಾಟದಲ್ಲಿ ನಿತ್ಯ ದುಡಿಯಬೇಕು. ಜಾನಪದ ಅಗಾಧವಾಗಿದ್ದು ಇದನ್ನು ಇತರರಿಗೆ ಅರ್ಥೈಸುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಡಾ. ರಮೇಶ್, ಶಶಿಕಲಾ ರಮೇಶ್ ಉಡುಪ, ಡಾ.ಎ.ಆರ್. ಬಾಬು, ಎಚ್.ಆರ್. ಶ್ರೀನಿವಾಸ್, ಸ್ನೇಕ್ ಮಹೇಶ್, ಚಿಕ್ಕಲಿಂಗಯ್ಯ, ಡಾ.ಆರ್. ನಂಜುಂಯ್ಯ , ಜೆ. ಶ್ರೀನಿವಾಸ್, ಕಲೆ ನಟರಾಜ್ರಿಗೆ ವಿವಿಧ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ರಂಗದೇಗುಲ ಕಲಾ ವೇದಿಕೆಯ ಅಧ್ಯಕ್ಷ ಎಸ್. ಶಾಂತರಾಜು, ಡಾ. ಸಬ್ನಿಳ್ಳಿ ರಾಜು, ಸಿ.ಎಂ. ನರಸಿಂಹಮೂರ್ತಿ,ಮಾಂಬಳ್ಳಿ ಅರುಣ್ಕುಮಾರ್, ವೇದಿಕೆಯ ಶಶಿಕಲಾ, ಶಂಕರ ರಾಧಾ, ಗೀತಾ, ಭಾಗ್ಯಮ್ಮ, ಸುಶೀಲಾ, ರೂಪೇಶ, ಮಹದೇವಪ್ರಭು, ಬಿ.ವಿ ಶಿವಣ್ಣ, ಬಿ. ರವಿ, ಸಿದ್ದರಾಜು, ಪ್ರಕಾಶ, ನಾಗರಾಜು ಕುಮಾರಸ್ವಾಮಿ, ಸೋಮಶೇಖರ್ ಸೇರಿದಂತೆ ಅನೇಕ ಕಲಾವಿದರು ಹಾಜರಿದ್ದರು.
