ಬೆಂಗಳೂರು: ದೇಶದಲ್ಲಿ ಮತಗಳ್ಳತನ ನಡೆಯುತ್ತಿದ್ದು, ಇದರ ವಿರುದ್ಧ ನಾವು ಕ್ವಿಟ್ ವೋಟ್ ಚೋರಿ ಚಳವಳಿ ಮಾಡಬೇಕಿದೆ ಎಂದು ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿ ಭಾರತ ಜೋಡೋ ಭವನದಲ್ಲಿ ಭಾನುವಾರ ನಡೆದ ಕ್ವಿಟ್ ಇಂಡಿಯಾ ದಿನ ಕಾರ್ಯಕ್ರಮದಲ್ಲಿ ಸಿಎಂ ಮಾತನಾಡಿದರು.
ನೀವು ಎಲ್ಲಾ ಕೆಲಸ ಬದಿಗಿಟ್ಟು ಮತಗಳ್ಳತನ ವಿರುದ್ಧ ಹೋರಾಟ ಮಾಡಿ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕು ಎಂದು ರಾಜ್ಯದ ಕಾರ್ಯಕರ್ತರಲ್ಲಿ ಮನವಿ ಮಾಡುವೆ. ರಾಜ್ಯದಲ್ಲಿ ಎಸ್ ಐಆರ್ ನಡೆಯುತ್ತಿದ್ದು, ರಾಜ್ಯದಲ್ಲಿ 1 ಕೋಟಿ ಮತದಾರರನ್ನು ಡಿಲೀಟ್ ಮಾಡಲು ಪ್ರಯತ್ನ ನಡೆಯುತ್ತಿದೆ. ನೀವು ನಿಮ್ಮ ಮತಗಳನ್ನು ಉಳಿಸಿಕೊಳ್ಳಬೇಕು. ಬದುಕಿಗಾಗಿ ಮತದಾನದ ಹಕ್ಕು ಉಳಿಸಿಕೊಳ್ಳಬೇಕು ಎಂದು ನಮ್ಮ ಕಾರ್ಯಕರ್ತರು ಹಾಗೂ ಬಿಎಲ್ಎ2ಗಳಿಗೆ ಮನವಿ ಮಾಡುತ್ತಿದ್ದೇವೆ ಎಂದು ಹೇಳಿದರು.
ನಾವು ಗ್ಯಾರಂಟಿ ಯೋಜನೆಗಳನ್ನು ಜನರಿಗಾಗಿ ನೀಡಿದ್ದು, ಮತದಾನದ ಹಕ್ಕು ಇಲ್ಲದವರಿಗೆ ಈ ಯೋಜನೆಗಳು ಲಭ್ಯವಾಗುವುದು ಕಷ್ಟವಾಗುತ್ತದೆ. ಬಿಹಾರದಲ್ಲಿ ಈಗಾಗಲೇ ಮತದಾನದ ಹಕ್ಕು ಇರುವವರಿಗೆ ಮಾತ್ರ ಸರ್ಕಾರಿ ಯೋಜನೆ ನೀಡಲಾಗುತ್ತಿದೆ. ಹೀಗಾಗಿ ಎಲ್ಲರ ಮತದಾನದ ಹಕ್ಕನ್ನು ಉಳಿಸಬೇಕು. ಗಣತಿ ನಮೂನೆ ತುಂಬಿ ಹಿಂತಿರುಗಿಸಿ. ಎಲ್ಲರಿಗೂ ಬಿಎಲ್ಎ2 ಆಗಲು ಸಾಧ್ಯವಿಲ್ಲ. ನಿಮಗೆ ಸಿಕ್ಕಿರುವ ಅವಕಾಶವನ್ನು ಉಳಿಸಿಕೊಳ್ಳಬೇಕು. ರಾಹುಲ್ ಗಾಂಧಿ ಅವರು ಈ ದೇಶದ ಪ್ರಧಾನಮಂತ್ರಿಯಾಗಲು ಇದು ಪೂರಕ ಹೆಜ್ಜೆಯಾಗಲಿದೆ ಎಂದು ಸಿಎಂ ಹೇಳಿದರು.
ನಾನು ಮುಖ್ಯಮಂತ್ರಿಯಾಗಿದ್ದರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ಕಾರ್ಯಕರ್ತರಿದ್ದರೆ ಪಕ್ಷ, ಪಕ್ಷ ಇದ್ದರೆ ಸರ್ಕಾರ. ಇದನ್ನು ನಾವೆಲ್ಲರೂ ನೆನಪಿನಲ್ಲಿ ಇಡಬೇಕು. ಅಧಿಕಾರ ತಾತ್ಕಾಲಿಕ ಎಂಬುದನ್ನು ಮರೆಯಬಾರದು. ಸ್ವಾತಂತ್ರ್ಯಕ್ಕೆ ಬೆಲ ಕಟ್ಟಲು ಆಗುವುದಿಲ್ಲ. ಸ್ವಾತಂತ್ರ್ಯ ಜೀವನದ ಉಸಿರು. ದೇಶದ ಸ್ವಾತಂತ್ರ್ಯಕ್ಕೆ ಮುನ್ನುಡಿ ಬರೆದ ಪವಿತ್ರವಾದ ದಿನ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಎಂದಿಗೂ ಜಗ್ಗಲ್ಲ, ಬಗ್ಗಲ್ಲ, ಕುಗ್ಗಲ್ಲ. ಈ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ದೇಶದಿಂದ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಕುಟುಂಬವನ್ನು ಹೊರಗೆಹಾಕಬೇಕು ಎಂಬ ದೊಡ್ಡ ಷಡ್ಯಂತ್ರ ನಡೆಯಿತು. ನಮ್ಮ ಇಂಡಿಯಾ ಒಕ್ಕೂಟ 25 ಸೀಟುಗಳ ಅಂತರದಲ್ಲಿ ಅಧಿಕಾರದಿಂದ ವಂಚಿತವಾಯಿತು. ಯಾವುದೇ ಪಕ್ಷಕ್ಕೆ ಅಥವಾ ವ್ಯಕ್ತಿಗೆ ಅಧಿಕಾರ ಶಾಶ್ವತವಲ್ಲ. ಆದರೆ ನಮ್ಮ ಬದ್ಧತೆಯನ್ನು ನಾನು ಮುಂದುವರಿಸುತ್ತಿದ್ದೇವೆ ಎಂದು ಡಿ.ಕೆ ಶಿ ತಿಳಿಸಿದರು.
ನಮ್ಮ ಗುರಿ 2028 ಹಾಗೂ 2029 ಆಗಿದೆ. ಕಾಂಗ್ರೆಸ್ ಮುಕ್ತ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಹೀಗಾಗಿ ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ. ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣದಲ್ಲಿ ಸಾಧ್ಯವಾಯಿತಾ ಇಲ್ಲ ಅಲ್ಲವೆ ಎಂದರು.
ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಸಂದರ್ಭದಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮ ಮಾಡಿದೆವು. ಅದರ ನೆನಪಿನಲ್ಲಿ ನಾವು 100 ಕಾಂಗ್ರೆಸ್ ಕಚೇರಿ ನಿರ್ಮಾಣ ಮಾಡಲು ತೀರ್ಮಾನಿಸಿದ್ದೇವೆ. ಪ್ರತಿ ತಾಲ್ಲೂಕಿನಲ್ಲಿ ಜಾಗ ಪಡೆಯಲಾಗಿದೆ,ಸಧ್ಯದಲ್ಲೇ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಕ್ಕೆ ಬಂದು ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದರು.
ಪ್ರತಿ ಗ್ರಾಮ ಪಂಚಾಯ್ತಿ ಹಾಗೂ ವಾರ್ಡ್ ಗಳಲ್ಲಿ ಯುವಕರ ಸಂಘಗಳನ್ನು ಸ್ಥಾಪಿಸಿ ರಾಜ್ಯಾದ್ಯಂತ ಒಟ್ಟು 10 ಸಾವಿರ ಭಾರತ ಜೋಡೋ ಯುವ ಶಕ್ತಿ ಸಂಘ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ನೀವು ಅದಕ್ಕೆ ಸಿದ್ಧತೆ ಮಾಡಿಕೊಂಡು ಯುವಕರನ್ನು ಸದಸ್ಯರಾಗುವಂತೆ ಮಾಡಬೇಕು. 10 ರೂ. ಗೌರವ ಧನ ನೀಡಿ ಸದಸ್ಯತ್ವ ಪಡೆಯಬಹುದು. 16-40 ವಯೋಮಾನದವರು ಸದಸ್ಯರಾಗಬಹುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
