ಮುದ್ದೇಬಿಹಾಳ: ಜನಪದ ಎಂದರೆ ಆಲಿಖಿತ ಸಂವಿಧಾನ, ಕರ್ನಾಟಕ ಜನಪದ ಇತಿಹಾಸ ಮತ್ತು ಪ್ರತಿಭೆಗಳು ಕೃಷಿ ಮೂಲದ ಸಂಸ್ಕೃತಿಯಿಂದ ಬಂದಂತವು ಅವುಗಳನ್ನು ಯಾರು ರಕ್ಷಿಸಬೇಕಿಲ್ಲ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜನಪದ ಎಸ್ ಬಾಲಾಜಿ ಹೇಳಿದರು.
ಜಾನಪದ ತನ್ನದೇ ಆದ ಸ್ವಯಂ ಪ್ರಭೆಯಿಂದ ಬೆಳೆಯುತ್ತದೆ ಆದರೆ ಕಲಾ ಪೋಷಣೆಗೆ ಸರಕಾರ ಮಾಶಾಸನವನ್ನು ಐದು ಸಾವಿರ ಹೆಚ್ಚಿಸಿ ಬೆಂಬಲವನ್ನು ನೀಡಬೇಕು ಎಂದು ಅವರು ಮನವಿ ಮಾಡಿದರು.
ಎಂಜಿಎಂ ಕೋರಿ ವಿದ್ಯಾವರ್ಧಕ ಸಂಘದ ಕಾಲೇಜು ಆವರಣದಲ್ಲಿ ನಡೆದ ತಾಲೂಕು ಕನ್ನಡ ಜನಪದ ಪರಿಷತ್ ನೂತನ ಘಟಕದ ಪದಗ್ರಹಣ ಹಾಗೂ ಜಾನಪದ ಬುಡಕಟ್ಟು ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ದಾನಿಗಳಿಂದ ಕಲಾವಿದರಿಗೆ ಪ್ರಶಸ್ತಿ, ನಗದು ಹಾಗೂ ಪೋಷಣೆಯಲ್ಲಿ ತೊಡಗಿರುವ ಜನಪದ ಪರಿಷತ್ತು, ಪ್ರತಿ ವರ್ಷ ಎರಡು ಸಾವಿರ ಹಳ್ಳಿಗಳಿಗೆ ತಲುಪಿ, ಗ್ರಾಮ ಸಭೆಯ ಅನುದಾನವನ್ನು ಕಲಾವಿದರಿಗೆ ತಲುಪುವಂತೆ ಕಾರ್ಯ ನಿರ್ವಹಿಸುತ್ತದೆ. ಸರಕಾರ ಈ ಕುರಿತು ಸೂಕ್ತ ಕಾರ್ಯ ನೀತಿಯನ್ನು ಹಮ್ಮಿಕೊಳ್ಳಬೇಕು. ಅನುದಾನವನ್ನು ಹೆಚ್ಚಿಸಬೇಕು ಎಂದು ಜಾನಪದ ಎಸ್.ಬಾಲಾಜಿ ಆಗ್ರಹಿಸಿದರು.
ಹಿರಿಯ ಸಾಹಿತಿ ಬಿ ಎಂ ಹಿರೇಮಠ ಮಾತನಾಡಿ, ಜನರ ಮಧ್ಯದಲ್ಲಿ ಕಾರ್ಯ ನಿರ್ವಹಿಸುತ್ತಾ ಕಲಾವಿದರಿಗೆ ಬೆಂಬಲ ನೀಡುತ್ತಿರುವ ಜನಪದ ಸಾಹಿತ್ಯ ಪರಿಷತ್ತು ಸರಕಾರ ಮಾಡದ ಕೆಲಸವನ್ನು ಮಾಡಿ, ಕನ್ನಡ ಸೇವೆಯನ್ನು ಮಾಡುತ್ತಿದೆ. ಮೌಲಿಕವಾದ ಜನಪದ ಸಂಪತ್ತು ನಮ್ಮಲ್ಲಿ ಇದ್ದರೂ ನೋಂದಣಿ ಮಾಡದೆ, ಗುರುತಿಸದೇ, ಗೌರವಿಸದೆ ಇರುವ ಸಮಾಜ ನಮ್ಮದು. ಹಿಂದೆ ಸಾಹಿತ್ಯ ಎಂದರೆ ಪಂಡಿತರ ಸಾಹಿತ್ಯ ಎಂದು ತಿಳಿಯಲಾಗಿತ್ತು ಅದನ್ನು ಜನರ ಸಾಹಿತ್ಯ ತಿಳಿಯಪಡಿಸಬೇಕು ಎಂದು ಸಲಹೆ ನೀಡಿದರು.
ತಾಲೂಕು ಘಟಕದ ನೂತನ ಅಧ್ಯಕ್ಷ ಪ್ರೊ ಎಸ್ ಎಸ್ ಹೂಗಾರ್ ಮಾತನಾಡಿ, ತಾಲೂಕು ಜನಪದ ಪ್ರತಿಭೆಗಳನ್ನು ಹಳ್ಳಿ ಗ್ರಾಮಗಳಲ್ಲಿ ತಿರುಗಾಡಿ ಅವರಿಗೆ ವೇದಿಕೆಯನ್ನು ಕಲ್ಪಿಸಿ ಸಂಘಟನೆಯನ್ನು ಮಾಡುವುದಾಗಿ ಭರವಸೆ ನೀಡಿದರು.
ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಡಿ ಎಂ ಸಾವಕಾರ ಮಾತನಾಡಿ, ಇಂದಿನ ಮಹಿಳೆಯರು, ಮಕ್ಕಳಲ್ಲಿ ಜನಪದ ಉಡುಗೆ, ತೊಡುಗೆ, ಆಹಾರ, ಸಂಸ್ಕೃತಿಯನ್ನು ಉಳಿಸುವಂತ ಕೆಲಸ ಮಾಡಬೇಕು ಎಂದು ತಿಳಿಸಿದರು.
ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕ ಡಾ ಬಿ. ಎಂ ಉಣ್ಣಿಬಾವಿ, ಕಾಶಿಬಾಯಿ ರಾಂಪುರ, ಗುರು ದೇಶಮುಖ, ವೀಣಾ ಹಿರೇಮಠ, ಜಿಲ್ಲಾ ಸಂಚಾಲಕ ಪುಂಡಲಿಕ ಮುರಾಳ, ಗಿರಿಜಾ ಕಡಿ, ಜಿ.ಹೆಚ್ ಚೌಹಾಣ, ಎನ್ ಆರ್ ಮುಕಾಶಿ, ಎಂ ಎಂ ಬೆಳಗಲ್, ಸಂಗಮೇಶ ಹಾರಿವಾಳ, ರಾಜು ನಲವಡೆ, ಸಂಗಣ್ಣ ಕಂಚಾಣಿ ಮುಂತಾದವರು ಭಾಗವಹಿಸಿದ್ದರು.
ಸಂಗಮೇಶ ಶಿವಣಗಿ ಸಂಗೀತ ಸೇವೆ ಮಾಡಿದರು, ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ನಿವೃತ್ತ ಪ್ರಾಧ್ಯಾಪಕ ಎಸ್ ಎಸ್ ಹೂಗಾರ್, ಕಾರ್ಯದರ್ಶಿಯಾಗಿ ಡಾ ಎಸ್ ಕೆ ಹರನಾಳ ಇತರ ಪದಾಧಿಕಾರಿಗಳೊಂದಿಗೆ ತಾಲೂಕು ಘಟಕದ ಪದಗ್ರಹಣ ಮಾಡಿದರು.
