ಬೆಂಗಳೂರು: ಪ್ರಗತಿ ಪರಿಶೀಲನೆ ನೆಪದಲ್ಲಿ ರಾಜ್ಯದ ಉದ್ದಗಲಕ್ಕೂ ಜಾಲಿ ಟ್ರಿಪ್ ಮಾಡುತ್ತಿರುವ ಮುಖ್ಯಮಂತ್ರಿಗಳು, ರಾಜ್ಯದ ನೀರಾವರಿ ಹಿತಾಸಕ್ತಿಯ ಬಗ್ಗೆ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು.
ಕಲಬುರ್ಗಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸಿಎಂ ಪ್ರಗತಿ ಪರಿಶೀಲನೆ ಕೇವಲ ಜಾಲಿಟ್ರಿಪ್ ಮಾತ್ರ. ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಇದೆ ಎಂದು ಹೇಳಿರುವ ಮುಖ್ಯಮಂತ್ರಿ ವರ್ತನೆ ಅತ್ಯಂತ ಹೊಣೆಗೇಡಿತನದ್ದು, ರಾಜ್ಯದ ನೀರಾವರಿಯ ಸಂಕಷ್ಟಗಳ ಬಗ್ಗೆ ಅವರಿಗೆ ಕನಿಷ್ಠ ಪರಿಜ್ಞಾನ ಕೂಡಾ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನದಿ ಜೋಡಣೆ ಬಗ್ಗೆ ನನ್ನ ವಿರೋಧ ಇಲ್ಲ ಯೋಜನೆ ಜಾರಿಗೆ ಬರಲೇಬೇಕು,ಆದರೆ ಗೋದಾವರಿ ಮತ್ತು ಕಾವೇರಿ ನದಿಗಳ ಜೋಡಣೆ ಯೋಜನೆಯಿಂದ ರಾಜ್ಯಕ್ಕೆ ಹಂಚಿಕೆಯಾಗಿರುವ ನೀರು ಎಷ್ಟು ಎಂಬುದನ್ನು ತಿಳಿದುಕೊಂಡು ಯೋಜನೆಯ ಬಗ್ಗೆ ಚರ್ಚಿಸಬೇಕು. ದೇವೇಗೌಡರು ಹೋರಾಟ ಮಾಡಿದ ನಂತರ ಹಂಚಿಕೆಯಾದ ನೀರಿನ ಪ್ರಮಾಣ ಎಷ್ಟು ಎಂಬುದರ ಬಗ್ಗೆ ಮುಖ್ಯಮಂತ್ರಿಗಳಿಗೆ ಕನಿಷ್ಠ ಮಾಹಿತಿ ಇಲ್ಲ ಹೆಚ್.ಡಿ.ಕೆ ದೂರಿದರು.
ನದಿ ಜೋಡಣೆ ಎಂದರೆ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ನಡೆಸುವ ಹಾಗಲ್ಲ, ನಿಮಗೆ ಮಾಹಿತಿ ಇಲ್ಲದಿದ್ದರೆ ನೀರಾವರಿ ತಜ್ಞರು, ಇಲಾಖೆಯ ಎಂಜಿನಿಯರ್ ಗಳಿಂದ ಅಥವಾ ರಾಜ್ಯದ ಪರ ವಕಾಲತ್ತು ವಹಿಸುವ ವಕೀಲರ ಬಳಿ ಮಾಹಿತಿ ಪಡೆಯಬೇಕಿತ್ತು. ಅದನ್ನು ಬಿಟ್ಟು ಮಾಧ್ಯಮಗಳಿಗೆ ಹೇಳಿಕೆ ನೀಡಿ ನಗೆಪಾಟಲಿಗೆ ತುತ್ತಾಗಿದ್ದೀರಿ ಎಂದು ಚಾಟಿ ಬೀಸಿದರು.
ಇದಿಷ್ಟು ಬೇಜವಾಬ್ದಾರಿ ಹೇಳಿಕೆ ನೀಡಿದ್ದು ಮಾತ್ರವಲ್ಲದೆ, ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಮುಖ್ಯಮಂತ್ರಿ ಅವರು ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಯ ಯೋಜನೆಯನ್ನು ಕೇಂದ್ರ ಸರ್ಕಾರವು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಲಿದೆ ಎಂದು ಹೇಳಿದ್ದಾರೆ. ನದಿ ಜೋಡಣೆ ಆಗಲಿ, ನಮ್ಮದೇನು ತಕರಾರು ಇಲ್ಲ. ಆದರೆ ಈ ಯೋಜನೆಯ ಮೂಲಕ ಕರ್ನಾಟಕಕ್ಕೆ ಎಷ್ಟು ನೀರು ದೊರೆಯುತ್ತದೆ ಎಂಬುದನ್ನು ಅವರು ರಾಜ್ಯಕ್ಕೆ ತಿಳಿಸಬೇಕು ಎಂದು ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಚರ್ಚೆ ಮಾಡುವ ಮುನ್ನ ಮುಖ್ಯಮಂತ್ರಿಗಳು ಆತುರಪಡಬಾರದು. ಸಲಹೆ ಪಡೆಯಬೇಕು, ಸಾಧ್ಯವಾದರೆ ವಿರೋಧ ಪಕ್ಷಗಳ ಮುಖಂಡರ ಜತೆ ಚರ್ಚೆ ಮಾಡಬಹುದಿತ್ತು. ಸದ್ಯಕ್ಕೆ ರೂಪಿಸಿರುವ ಕೃಷ್ಣಾ, ಗೋದಾವರಿ. ಕಾವೇರಿ ಜೋಡಣೆ ಯೋಜನೆಯಿಂದ ಕರ್ನಾಟಕಕ್ಕೆ ಉಪಯೋಗವಿಲ್ಲ. ಈ ಬಗ್ಗೆ ಕೂಲಂಕಶವಾಗಿ ಮಾಹಿತಿ ಪಡೆದುಕೊಂಡು ಮಾತನಾಡಿ ಎಂದು ಕೇಂದ್ರ ಸಚಿವರು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು.
ಕೃಷ್ಣಾ, ಕಾವೇರಿ, ಗೋದಾವರಿ ನದಿಗಳ ಜೋಡಣೆ ಯೋಜನೆಯಲ್ಲಿ ರಾಜ್ಯಕ್ಕೆ ಎಷ್ಟು ನೀರು ಹಂಚಿಕೆ ಆಗುತ್ತದೆ ಎಂಬುದು ನಿರ್ಧಾರ ಆಗದೆ ಈ ಯೋಜನೆಗೆ ಹೇಗೆ ಸಮ್ಮತಿ ಕೊಡುತ್ತೀರಿ ಎಂದು ಸಿಎಂಗೆ ಪ್ರಶ್ನಿಸಿದ ಕೇಂದ್ರ ಸಚಿವರು; ಒಂದು ವೇಳೆ ನೀರು ಹಂಚಿಕೆ ಪ್ರಮಾಣ ನಿಗದಿಯಾಗದೆ ಯೋಜನೆಗೆ ಒಪ್ಪಿಗೆ ಕೊಟ್ಟಿದ್ದೆ ಆದರೆ ಅದು ಕನ್ನಡಿಗರಿಗೆ ಮಾಡುವ ದೊಡ್ಡ ದ್ರೋಹ ಆಗುತ್ತದೆ ಎಂದು ಎಚ್ಚರಿಸಿದರು.
ನೀರಿನ ಹಂಚಿಕೆಯ ಬಗ್ಗೆ ರಾಜ್ಯವು ವಿವಾದಗಳನ್ನು ಎದುರಿಸುತ್ತಿದೆ. ಹಲವಾರು ಪ್ರಕರಣಗಳಲ್ಲಿ ನಾವು ಕಾನೂನು ಹೋರಾಟ ನಡೆಸುತ್ತಿದ್ದೇವೆ. ಈ ಯೋಜನೆಗೆ ಸಂಬಂಧಿಸಿ ಕಾನೂನು ಹೋರಾಟ ಮಾಡಬೇಕು. ನಿಮ್ಮದೇ ಪಕ್ಷದ ನಾಯಕ ಹೆಚ್.ಕೆ.ಪಾಟೀಲ್ ಅವರು ‘ಕೃಷ್ಣಾ ಕಣ್ಣೀರ ಕಥೆ’ ಎನ್ನುವ ಪುಸ್ತಕ ಬರೆದಿದ್ದಾರೆ. ಅವರಿಗೆ ಎಲ್ಲಾ ಮಾಹಿತಿ ಗೊತ್ತಿದೆ. ಅವರ ಸಲಹೆಯನ್ನು ಪಡೆಯಿರಿ ಎಂದು ಸಿಎಂ ಗೆ ಹೆಚ್ ಡಿ ಕೆ ಸಲಹೆ ನೀಡಿದರು.
ಮುಖ್ಯಮಂತ್ರಿ ಜನರ ಸಮಸ್ಯೆಗಳ ಬಗ್ಗೆ ಪ್ರವಾಸ ಮಾಡುತ್ತಿದ್ದಾರೆ ಎಂದು ಭಾವಿಸಿದ್ದೆ. ರಾಜ್ಯ ಒಂದು ಕಡೆ ಬರ, ಮತ್ತೊಂದು ಕಡೆ ಪ್ರವಾಹ ಪರಿಸ್ಥಿತಿ ಇದೆ ಇಂತಹ ಸಂದರ್ಭದಲ್ಲಿ ಅವರು ಜಾಲಿ ಟ್ರಿಪ್ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬರದಿಂದ ಜನರು ಕಂಗೆಟ್ಟಿದ್ದಾರೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ತಂಡೋಪ ತಂಡವಾಗಿ ಗುಳೆ ಹೊರಟಿದ್ದಾರೆ. ಪತ್ರಿಕೆಗಳಲ್ಲಿ ಪುಟಗಟ್ಟಲೆ ಈ ಬಗ್ಗೆ ವರದಿಗಳನ್ನು ಬರೆದಿದ್ದಾರೆ. ನೆರೆಯಿಂದ ಬೆಳೆಗಳು ನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಖ್ಯಮಂತ್ರಿಯಾದವರಿಗೆ ಇದು ಗೊತ್ತಿಲ್ಲವೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಶಾಸಕ ಸ್ವರೂಪ ಗೌಡ, ಗ್ರೇಟರ್ ಬೆಂಗಳೂರು ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ, ಮಾಜಿ ಶಾಸಕ ಚೌಡರೆಡ್ಡಿ ತೂಪಲ್ಲಿ ಮತ್ತಿತರರು ಈ ವೇಳೆ ಹಾಜರಿದ್ದರು.
