ಬೆಂಗಳೂರು: ನಾಡಹಬ್ಬ ದಸರಾ ಹಬ್ಬವನ್ನು ಈ ಬಾರಿ 11 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ದಸರಾ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಸಂಸ್ಕೃತಿ ಪರಂಪರೆಗಳಿಗೆ ಅನುಗುಣವಾಗಿ ಹೊಸ ಹೊಸ ಕಾರ್ಯಕ್ರಮಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.
ನಾಡಹಬ್ಬ ದಸರಾ- 2026 ಆಚರಣೆ ಸಂಬಂಧ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆ ಬಳಿಕ ಸಿಎಂ ಮಾಧ್ಯಮಗಳೊಂದಿಗೆ ವಿವರ ನೀಡಿದರು.
ಈ ಬಾರಿಯ ದಸರಾ ಕಾರ್ಯಕ್ರಮದ ಅಂಗವಾಗಿ ಆಗಸ್ಟ್ 26ರಂದು ಬೆಳಗ್ಗೆ 10 ಗಂಟೆಗೆ ಗಜಪೂಜೆ ನಡೆಯಲಿದೆ. ದಸರಾ ಉದ್ಘಾಟನೆ ಅಕ್ಟೋಬರ್ 11ರಂದು ಬೆಳಗ್ಗೆ 11.50ಕ್ಕೆ ನಿಗದಿ ಮಾಡಲಾಗಿದೆ. ಜಂಬು ಸವಾರಿ, ನಂದಿ ಪೂಜೆ ಕಾರ್ಯಕ್ರಮವನ್ನು ಅಕ್ಟೋಬರ್ 21ರಂದು ಮಧ್ಯಾಹ್ನ 1.30ಕ್ಕೆ ನಡೆಸಲಾಗುವುದು. ಜಂಬುಸವಾರಿ ಪುಷ್ಪಾರ್ಚನೆಯನ್ನು ಅಂದೇ ಸಂಜೆ 4.10ಕ್ಕೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಅನೇಕ ಸಲಹೆಗಳು ಬಂದಿದೆ. ದಸರಾ ಆಯೋಜನೆ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಕಾರ್ಯಕಾರಿ ಸಮಿತಿ ರಚನೆ ಮಾಡಲಿದ್ದೇನೆ. ಈ ಬಾರಿ ಏರ್ ಶೋ ನಡೆಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕೆಂಬ ಸಲಹೆ ಬಂದಿದೆ. ಹಾಗಾಗಿ ಈ ವಿಚಾರವಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ದಸರಾ ಉದ್ಘಾಟನೆಯನ್ನು ಯಾರ ಕೈಯಿಂದ ಮಾಡಿಸಬೇಕು ಎಂಬ ತೀರ್ಮಾನವನ್ನು ಸಮಿತಿಯು ನೀಡಿದೆ ನಾನು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದರು.
ಐತಿಹಾಸಿಕ ಮೈಸೂರು ದಸರಾ ಪಾರಂಪರಿಕ ಉತ್ಸವವಾಗಿದ್ದು, ನಮ್ಮ ರಾಜ್ಯದ ಹೆಮ್ಮೆ. ಪ್ರತಿ ವರ್ಷ ಉತ್ಸವದ ಸ್ವರೂಪ ಬದಲಾಗುತ್ತಿದೆ. ಹೊಸ ಹೊಸ ಆಲೋಚನೆ, ಆವಿಷ್ಕಾರಗಳೊಂದಿಗೆ ಕಾರ್ಯಕ್ರಮ ಅಳವಡಿಸಲು ಬೇಡಿಕೆ ಬರುತ್ತಿದೆ. ಅಂತಾರಾಷ್ಟ್ರೀಯ ಖ್ಯಾತಿಗೆ ತಕ್ಕ ಹಾಗೆ ನಮ್ಮ ಸಂಸ್ಕೃತಿಗೆ ಅನುಗುಣವಾಗಿ ಕಾರ್ಯಕ್ರಮ ಮಾಡಲಾಗುವುದು. ಬರಗಾಲ ಎಂಬ ಕಾರಣಕ್ಕೆ ಸ್ವಲ್ಪ ಹಣ ಉಳಿಸಲು ಹೋಗಿ ನಮ್ಮ ಸಂಸ್ಕೃತಿ ಪರಂಪರೆಯ ವೈಭವವನ್ನು ಕಡಿಮೆ ಮಾಡುವುದು ಬೇಡ. ಬರಗಾಲ ಕಾರಣದಿಂದ ದಸರಾ ನಿಲ್ಲಿಸೋದೊ ಅಥವಾ ಸರಳವಾಗಿ ಆಚರಣೆ ಮಾಡೋದೊ ಎಂಬ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಕಳೆದ ಮೂರು ವರ್ಷಗಳಿಂದ ನಮ್ಮ ಸರ್ಕಾರ ಚೆಸ್ಕಾಂ ಮೂಲಕ ಮೈಸೂರು ನಗರದಲ್ಲಿ ದೀಪಾಲಂಕಾರ ಮಾಡಿ ವೈಭವಯುತವಾಗಿ ಆಚರಣೆ ಮಾಡುತ್ತಿದೆ, ಶಕ್ತಿ ಯೋಜನೆಯಿಂದಾಗಿ ಕಳೆದ ಎರಡು ಮೂರು ವರ್ಷಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ರಾಷ್ಟ್ರಮಟ್ಟದ ಗಾಯಕರನ್ನು ಕರೆಸಿ ಕಾರ್ಯಕ್ರಮ ಮಾಡಲಾಗಿದೆ. ಈ ಬಾರಿಯ ಆಚರಣೆಗೆ ಸಂಬಂಧಿಸಿದಂತೆ ಮೈಸೂರಿನ ಶಾಸಕರಾದ ತನ್ವೀರ್ ಸೇಠ್, ಶ್ರೀವತ್ಸ, ಹರೀಶ್ ಗೌಡರು, ಜಿ.ಟಿ ದೇವೇಗೌಡರು, ಮಹದೇವಪ್ಪ ಅವರು ಸಹಕಾರ ನೀಡಿದ್ದಾರೆ. ಸಂಸತ್ ಸದಸ್ಯರು ಅನೇಕ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.
ಸಮಿತಿ ರಚನೆ ಹೆಸರಿನಲ್ಲಿ ರಾಜಕಾರಣ ಮಾಡೋದು ಬಿಡಬೇಕು. ಇದರಲ್ಲಿ ನಾವು ರಾಜಕಾರಣ ಮಾಡುವುದಿಲ್ಲ, ಅದರ ಅವಶ್ಯಕತೆಯೂ ಇಲ್ಲ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದ್ದೇವೆ. 8 ವರ್ಷಗಳ ಕಾಲ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಈ ಹಬ್ಬವನ್ನು ಉತ್ತಮವಾಗಿ ನಡೆಸಿಕೊಂಡು ಬಂದಿದ್ದಾರೆ, ನಾವು ಅದನ್ನು ಇನ್ನಷ್ಟು ಉತ್ತಮವಾಗಿ ಮುಂದುವರೆಸಿಕೊಂಡು ಹೋಗೋಣ ಎಂದು ನಮ್ಮ ಸಹೋದ್ಯೋಗಿಗಳಾದ ಪರಮೇಶ್ವರ್, ಜಾರ್ಜ್, ಯತೀಂದ್ರ ಅವರು ಸಲಹೆ ನೀಡಿದ್ದಾರೆ. ಈ ಬಾರಿಯೂ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ವಿಜೃಂಭಣೆ ಎಂದರೆ ಕೇವಲ ಹಣ ವೆಚ್ಚ ಮಾಡುವುದಷ್ಟೇ ಅಲ್ಲ. ಹೊಸ ಚಿಂತನೆಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಪರಂಪರೆಯನ್ನು ಉಳಿಸಿಕೊಂಡು ಹೋಗುವುದಾಗಿದೆ ಎಂದು ತಿಳಿಸಿದರು.
ನಮ್ಮ ರಾಜ್ಯದಲ್ಲಿ ಏನೆಲ್ಲಾ ಸಂಪ್ರದಾಯವಿದೆ, ಅವುಗಳನ್ನು ಪರಿಶೀಲಿಸುತ್ತೇವೆ, ಅಂತಾರಾಷ್ಟ್ರೀಯ ಮಟ್ಟದ ಗಾಯಕರ ಕಾರ್ಯಕ್ರಮ, ಕ್ರೀಡೆಗಳು, ಹಿಂದೂ ಸಂಪ್ರದಾಯದಂತೆ ಮಾಡುವ ಸಲಹೆ ಬಂದಿದೆ. ಇದು ಡಿ ಕೆ ಶಿವಕುಮಾರ್ ಒಬ್ಬನೇ ಕೈಗೊಳ್ಳುವ ತೀರ್ಮಾನವಲ್ಲ. ಎಲ್ಲಾ ಸಹೋದ್ಯೋಗಿಗಳ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಸಿಎಂ ತಿಳಿಸಿದರು.
ಗೋಲ್ಡನ್ ಪಾಸ್ ವಿತರಣೆ ವಿಚಾರವಾಗಿ ಗೊಂದಲ ಹೆಚ್ಚುವ ಬಗ್ಗೆ ವರದಿಗಾರರ ಪ್ರಶ್ನೆಗೆ ಈ ವಿಚಾರವಾಗಿ ಕೆಲವರು ಸಲಹೆ ನೀಡಿದ್ದು, ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು. ಹೊರಗಡೆಯಿಂದ ಬರುವವರಿಗೆ ಗೌರವ ಕೊಡಬೇಕು. ಮೈಸೂರು ಆತಿಥ್ಯಕ್ಕೆ ಹೆಸರುವಾಸಿ. ಅದನ್ನು ಹಾಳುಮಾಡಿಕೊಳ್ಳುವುದು ಬೇಡ. ಮಹಾರಾಜರ ಇತಿಹಾಸ ಮರೆಯಾಗಬಾರದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
