ಬೆಂಗಳೂರು: ವೈಯಕ್ತಿಕ ದಾಳಿ ನನ್ನ ಸಂಸ್ಕಾರವಲ್ಲ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ
ಕುಣಿಗಲ್ ಶಾಸಕ ಡಾ. ಹೆಚ್.ಡಿ. ರಂಗನಾಥ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನಿಖಿಲ್ ಅವರು ಟ್ವೀಟ್ ಮಾಡಿ,ಜೀನ್’ ಎನ್ನುವ ಪದವನ್ನು ರಾಮನಗರದ ಸಾಮೂಹಿಕ ಎಸ್ಐಅರ್ ಅರ್ಜಿ ವಿತರಣೆ ಮತ್ತು ಕುಣಿಗಲ್ನ ಬೂತ್ ಸಂಖ್ಯೆ 19 ರ ವಿದ್ಯಮಾನಕ್ಕೆ ಹೋಲಿಸಿ ಸಾಮಾನ್ಯ ಅರ್ಥದಲ್ಲಿ ಬಳಸಿದ್ದೇನೆ. ಅದರಲ್ಲಿ ವೈಯಕ್ತಿಕ ನಿಂದನೆಯ ಉದ್ದೇಶವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೆಚ್.ಡಿ. ದೇವೇಗೌಡರ ಆದರ್ಶಗಳಲ್ಲಿ ಬೆಳೆದ ನನಗೆ ಯಾರ ವಿರುದ್ಧವೂ ವೈಯಕ್ತಿಕ ವಾಗ್ದಾಳಿ ನಡೆಸುವುದು ಸಂಸ್ಕಾರವಲ್ಲ ಅವರು ಹೇಳಿದ್ದಾರೆ.
ಹಿಂದೆ ಜೆಡಿಎಸ್ನಲ್ಲಿದ್ದು ಇಂದು ಬೇರೆ ಪಕ್ಷದಲ್ಲಿರುವ ಶಾಸಕರು ನನ್ನ ತಂದೆ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ದಿನನಿತ್ಯ ಕೀಳು ಮಟ್ಟದ ವೈಯಕ್ತಿಕ ದಾಳಿ ಮಾಡುತ್ತಿರುವಾಗ ನಿಮ್ಮ ಕಳಕಳಿ ಎಲ್ಲಿ ಹೋಗಿತ್ತು ಎಂದು ರಂಗನಾಥ್ ಅವರನ್ನು ತಿಕ್ಷಣವಾಗಿ ಪ್ರಶ್ನಿಸಿದ್ದಾರೆ.
ಕುಮಾರಣ್ಣನವರ ರಾಜಕೀಯ ಅನುಭವಕ್ಕಿಂತಲೂ ಕಡಿಮೆ ವಯಸ್ಸಿನ ಶಾಸಕರೊಬ್ಬರು ‘ಖಬರ್ದಾರ್ ಕುಮಾರಣ್ಣ’ ಎಂದು ಧಮಕಿ ಹಾಕಿದಾಗ ನೀವು ಧ್ವನಿ ಎತ್ತಿದ್ದರೆ ನಿಮ್ಮ ನಿಲುವನ್ನು ನಾವು ಗೌರವಿಸುತ್ತಿದ್ದೆವು. ಅಧಿಕಾರಕ್ಕಾಗಿ ಇಂತಹ ಇಬ್ಬಂದಿ ರಾಜಕಾರಣ ಯಾರಿಗೂ ಶೋಭೆ ತರುವುದಿಲ್ಲ ಎಂದು ನಿಖಿಲ್ ಹೇಳಿದ್ದಾರೆ.
ಇನ್ನು ಮುಂದಾದರೂ ವೈಯಕ್ತಿಕ ಕೆಸರೆರಚಾಟ ಬಿಟ್ಟು ಜನರ ನೈಜ ಸಮಸ್ಯೆಗಳಿಗಾಗಿ ಒಟ್ಟಾಗಿ ಹೋರಾಡೋಣ ಎಂದು ಕರೆ ನೀಡಿದ್ದಾರೆ.
