ಮೈಸೂರು: ವಿವಿಧ ಕಾರಣಗಳಿಂದ ಪುರುಷರೂ ನೊಂದಿರುತ್ತಾರೆ,ದೌರ್ಜನ್ಯ ಕೂಡಾ ಆಗುತ್ತದೆ,ಹಾಗಾಗಿ ಪುರುಷರ ರಕ್ಷಣೆಗೂ ಆಯೋಗದ ಅಗತ್ಯವಿದೆ ಎಂದು
ವಿಧಾನಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್ ಹೇಳಿದರು
ಸಮಾಜದಲ್ಲಿ ನಾನಾ ಕಾರಣಗಳಿಂದ ನೊಂದ ಪುರುಷರ ಹಕ್ಕುಗಳ ರಕ್ಷಣೆ ಹಾಗೂ ಅವರಿಗೆ ನ್ಯಾಯ ಒದಗಿಸುವ ಸಲುವಾಗಿ ಕಾರ್ಯನಿರ್ವಹಿಸಲು ಪುರುಷರ ಆಯೋಗ ರಚಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರಂತೆ ಪುರುಷರೂ ಸಮಾಜದಲ್ಲಿ ಹಲವು ರೀತಿಯ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ. ಮಹಿಳಾ ಆಯೋಗದಂತೆ ನೊಂದ ಪುರುಷರಿಗೂ ಕಾನೂನುಬದ್ಧ ಸಂಸ್ಥೆ ಅಗತ್ಯವಾಗಿದೆ. ಇದಕ್ಕಾಗಿ ಕಾನೂನಿನಲ್ಲಿ ತಿದ್ದುಪಡಿ ತಂದು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಿಳಾ ಪೊಲೀಸ್ ಠಾಣೆಗಳಲ್ಲೂ ಪುರುಷರ ಶೋಷಣೆ ನಡೆಯುತ್ತಿದೆ. ಹೀಗೆ ನೊಂದವರ ನೆರವಿಗಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ ಟ್ರಸ್ಟ್ ಸ್ಥಾಪಿಸಲಾಗಿದೆ. ಇದರ ಅಧಿಕೃತ ಉದ್ಘಾಟನೆ ಮಂಡ್ಯದಲ್ಲಿ ಕೆಲವೇ ದಿನಗಳಲ್ಲಿ ನಡೆಯಲಿದೆ. ಮಹಿಳೆಯರಿಂದ ದೌರ್ಜನ್ಯಕ್ಕೆ ಒಳಗಾಗುವವರ ಹಿತ ಕಾಯುವುದು ಟ್ರಸ್ಟ್ನ ಪ್ರಮುಖ ಉದ್ದೇಶವಾಗಿದೆ ಎಂದು ವಿಶ್ವನಾಥ್ ಹೇಳಿದರು.
