ಮೈಸೂರು: ಮೈಸೂರು–ಕೊಡಗು ಸಂಸದರಾದ ಯದುವೀರ್ ಒಡೆಯರ್ ಅವರು ಶನಿವಾರ ಕೆಂಪೇಗೌಡ ವೃತ್ತ (ಮಣಿಪಾಲ್ ಜಂಕ್ಷನ್) ನಲ್ಲಿ ಎನ್ ಹೆಚ್ ಎ ಐ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕಾಮಗಾರಿಗೆ ಸಂಬಂಧಿಸಿದ ಅನುಮೋದನೆ 2026ರ ಜನವರಿ 19ರಂದು ನವದೆಹಲಿಯಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ ನೀಡಲಾಗಿತ್ತು.
ಅದರಂತೆ ಪ್ರಾರಂಭವಾಗಿರುವ ಕಾಮಗಾರಿಗಳ ಪ್ರಗತಿಯನ್ನು ಸ್ಥಳಕ್ಕೆ ಭೇಟಿ ನೀಡಿ ಯದುವೀರ್ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಎನ್ಎಚ್ಎಐ ಯೋಜನಾ ನಿರ್ದೇಶಕರು, ಮಹಾನಗರ ಪಾಲಿಕೆಯ ಇಂಜಿನಿಯರ್ ಹಾಗೂ ಅರಣ್ಯ ಸಂರಕ್ಷಣಾಧಿಕಾರಿಗಳು ಸಂಸದರಿಗೆ ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ಸಂಸದರು, ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಎನ್ಎಚ್ಎಐ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಕಾಮಗಾರಿಗಳಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು,ವಾರಾಂತ್ಯಗಳಲ್ಲಿ ಹೆಚ್ಚಿನ ವಾಹನ ಸಂಚಾರ ಇರುವುದರಿಂದ ಹೆಚ್ಚುವರಿ ಟ್ರಾಫಿಕ್ ಪೊಲೀಸರನ್ನು ನಿಯೋಜಿಸುವ ಬಗ್ಗೆ ಟ್ರಾಫಿಕ್ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಜೊತೆಗೆ ಕಾಮಗಾರಿಗಳು ಅತ್ಯುತ್ತಮ ಗುಣಮಟ್ಟದಲ್ಲಿ ನಡೆಯಬೇಕು ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಸಂಸದರು ಹೇಳಿದರು.
ಈ ಯೋಜನೆಯಿಂದ ಈ ಜಂಕ್ಷನ್ನಲ್ಲಿರುವ ಟ್ರಾಫಿಕ್ ಬಾಟಲ್ನೆಕ್ ಸಮಸ್ಯೆ ನಿವಾರಣೆಯಾಗಲಿದೆ. ಜೊತೆಗೆ ಮೈಸೂರು–ಬೆಂಗಳೂರು ರಸ್ತೆಯ ಪ್ರವೇಶ ಹಾಗೂ ನಿರ್ಗಮನ ವ್ಯವಸ್ಥೆಯನ್ನೂ ಈ ಯೋಜನೆಯಡಿ ಸುಧಾರಿಸಲಾಗುತ್ತದೆ. ಇದರಿಂದ ಈ ರಸ್ತೆಯನ್ನು ಬಳಸುವ ಎಲ್ಲಾ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ, ಎಂದು ಯದುವೀರ್ ತಿಳಿಸಿದರು.
