ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಕೈಗಾರಿಕೆಗಳನ್ನು ತರುವ ಕೆಲಸ ಪ್ರಗತಿಯಲ್ಲಿದೆ,ಶೀಘ್ರವೆ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ ಪರೀಕ್ಷಾ ಕೇಂದ್ರ ತರುವ ಕೆಲಸ ಆಗಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಜಾಗ ಹಂಚಿಕೆಯ ಪತ್ರ ನಮ್ಮ ಕೈ ಸೇರಿದ ಕೂಡಲೇ ಕೇಂದ್ರದ ಪರಿಣಿತರ ತಂಡ ಮಂಡ್ಯ ಜಿಲ್ಲೆಗೆ ಬಂದು ಪರಿಶೀಲನೆ ನಡೆಸಲಿದೆ ಎಂದು ಅವರು ಹೇಳಿದರು.
ವಿಸಿ ಫಾರಂನಲ್ಲಿ 14 ಕೋಟಿ ವೆಚ್ಚದ ಒಳಾಂಗಣ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಹೆಚ್.ಡಿ.ಕೆ,ನಾನು ಮಾತು ಕೊಟ್ಟಿದ್ದೇನೆ, ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ.
ಎ ಆರ್ ಎ ಐ ಪರೀಕ್ಷಾ ಕೇಂದ್ರದ ಕೆಲಸಗಳು ದೆಹಲಿ ಮಟ್ಟದಲ್ಲಿ ವೇಗದಿಂದ ನಡೆಯುತ್ತಿವೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಮಂಡ್ಯದಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ಬೇಕು ಎಂಬುದು ಬಹುದಿನಗಳ ಬೇಡಿಕೆ. ಅದನ್ನು ಈಡೇರಿಸುತ್ತಿದ್ದೇವೆ. ಈಗ ಭೂಮಿಪೂಜೆ ನೆರವೇರಿಸಲಾಗಿದೆ. ಅತಿ ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದೆ, ಅಷ್ಟೇ ವೇಗವಾಗಿ ಕಾಮಗಾರಿಯನ್ನು ಮುಗಿಸಲಾಗುವುದು ಎಂದು ಭರವಸೆ ನೀಡಿದರು.
ತಮ್ಮ ಮನವಿಯನ್ನು ಪುರಸ್ಕರಿಸಿ ಖೇಲೋ ಇಂಡಿಯಾ ಯೋಜನೆ ಅಡಿಯಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಮಂಜೂರಾತಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕೇಂದ್ರದ ಕ್ರೀಡಾ ಸಚಿವರಾದ ಮನ್ಸೂಖ್ ಮಾಂಡವಿಯಾ ಅವರಿಗೆ ಧನ್ಯವಾದ ತಿಳಿಸುತ್ತೇನೆ, ಅವರ ಕಾಳಜಿಯನ್ನು ನಾನು ಮರೆಯಲಾರೆ ಎಂದು ಕೇಂದ್ರ ಸಚಿವರು ಹೇಳಿದರು.
ಟಿಸಿಎಸ್, ಉಕ್ಕು ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಉಕ್ಕು ಪ್ರಾಧಿಕಾರ, ಇನ್ಫೋಸಿಸ್, ಹಿಂದೂಜಾ, ಹೆಚ್ ಎಂಟಿ ಸೇರಿದಂತೆ ಹಲವಾರು ಕಂಪನಿಗಳು ತಮ್ಮ ಸಿಎಸ್ಆರ್ ನಿಧಿಯಲ್ಲಿ ಅನುದಾನ ನೀಡಿವೆ. ಆ ಮೂಲಕ 380ಕ್ಕೂ ವಿಕಲಚೇತನ ಫಲಾನುಭವಿಗಳಿಗೆ ಎಲೆಕ್ಟ್ರಿಕ್ ವಾಹನಗಳು, ಮಂಡ್ಯದ 600 ಶಾಲೆಗಳಿಗೆ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಹಾಗೂ ಮಂಡ್ಯದ ಮಿಮ್ಸ್ ಗೆ ಸುಸಜ್ಜಿತ ಆಂಬ್ಯುಲೆನ್ಸ್ ನೀಡಲಾಗಿದೆ. ಕಾರ್ಪೊರೇಟ್ ಕಂಪನಿಗಳು ತಮ್ಮ ಸಾಮಾಜಿಕ ಕಳಕಳಿಯನ್ನು ತೋರಿಸಿವೆ ಎಂದು ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ಯುವಜನ ಸಬಲೀಕರಣಕ್ಕೆ ನರೇಂದ್ರ ಮೋದಿ ಅವರ ಸರಕಾರ ಅತಿಹೆಚ್ಚು ಆದ್ಯತೆ ನೀಡಿ ಕೆಲಸ ಮಾಡುತ್ತಿದೆ. ಪ್ರತಿ ಸಂಪುಟ ಸಭೆಯಲ್ಲಿ ಯುವಜನರ ಕಲ್ಯಾಣಕ್ಕೆ ಪ್ರಧಾನಿಗಳು ಅಗತ್ಯ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ಸೂಚನೆಗಳನ್ನು ಮನ್ಸೂಖ್ ಮಾಂಡವಿಯಾ ಅವರು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುತ್ತಿದ್ದಾರೆ ಎಂದು ಹೇಳಿದರು.
