ಹುಣಸೂರು: ಹುಣಸೂರು ತಾಲೂಕಿನ ಹಾಡಿಗಳಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದೆ ಜನ ಹೈರಾಣಾಗಿದ್ದಾರೆ.
ಇಲ್ಲಿ ಐದಾರು ಹಾಡಿಗಳಿದ್ದು ಯಾವುದೇ ಹಾಡಿಗಳಲ್ಲೂ ಸರಿಯಾದ ಡಾಂಬರು ರಸ್ತೆಗಳು ಇಲ್ಲ, ಒಳಚರಂಡಿ ವ್ಯವಸ್ಥೆ ಇಲ್ಲ ಕುಡಿಯುವ ನೀರಿನ ವ್ಯವಸ್ಥೆಯೂ ಸರಿಯಾಗಿಲ್ಲ.
ಬೇಸಿಗೆ ಉರಿಬಿಸಿಲಿನ ಬೇಗೆಯಲಿ ಹಾಡಿ ಜನ ಬೆಂದುಹೋಗುತ್ತಿದ್ದಾರೆ.ಶಾಲೆಗಳಿಗೆ ಮಕ್ಕಳು ನಡೆದು ಹೋಗಬೇಕಿದೆ.ಬಸ್ ವ್ಯವಸ್ಥೆ ಸರಿಯಾಗಿಲ್ಲ.
ಮಳೆ ಬಂದಾಗೆಲ್ಲಾ ರಸ್ತೆಗಳು ಕೆಸರು ಗದ್ದೆಯಾಗಿ ರಾಡಿಯಾಗುತ್ತದೆ.ಮಣ್ಣು ಮಿಶ್ರಿತ ನೀರು ಮನೆಗಳಿಗೆ ನುಗ್ಗುತ್ತದೆ.
ಕುಡಿಯುವ ನೀರಿನ ಟ್ಯಾಂಕ್ ಇದ್ದರೂ ಶುದ್ದಪಡಿಸದೆ ಗಲೀಜಾಗಿದೆ.ಕೊಳಕು ನೀರನ್ನೇ ಕುಡಿಯಬೇಕಿದೆ.
ಅಭಿವೃದ್ಧಿ ಕಾಣದ ಈ ಹಾಡಿಗಳ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಾಗಲೀ ಸಂಬಂಧಪಟ್ಟ ಅಧಿಕಾರಿಗಳಾಗಲೀ ಈತನಕ ಗಮನ ಹರಿಸಿಲ್ಲ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.
ಚುನಾವಣೆ ವೇಳೆ ಮತ ಕೇಳಲು ಬರುವ ಜನಪ್ರತಿನಿಧಿಗಳು ನಂತರ ಹಾಡಿಗಳನ್ನು ಮರೆತೇ ಬಿಡುತ್ತಾರೆ. ಈಗಲಾದರೂ ಎಚ್ಚೆತ್ತು ಹಾಡಿಗಳನ್ನು ಅಭಿವೃದ್ಧಿಪಡಿಸಬೇಕು. ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಇಲ್ಲದಿದ್ದರೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತ್ತು ಮುಂದಿನ ದೊಡ್ಡ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಚೆಲುವರಾಜು ಎಚ್ಚರಿಸಿದ್ದಾರೆ.
