ಮೈಸೂರು: ಅಕ್ಷರ ಸಂಸ್ಕಾರ ಕಲಿಸುವ ಮಹತ್ತರ ಆಶಯದೊಂದಿಗೆ ಮೈಸೂರಿನಲ್ಲಿ ಬಾಲಬೋಧಿನಿ ಎಂಬ ಅರ್ಥಪೂರ್ಣ ಹೆಸರಿನಲ್ಲಿ ಆರಂಭವಾದ ಶಾಲೆ ಈಗ ೧೩೦ ವರ್ಷಗಳನ್ನು ದಾಟಿ ಮುಂದೆ ಸಾಗಿದೆ.
ಆದರೆ,ಶತಕ ಪೂರೈಸಿ ಮುಂದೆ ಸಾಗಿರುವ ಈ ಶಾಲೆ ಹಿರಿತನಕ್ಕೆ ತಕ್ಕಂತೆ ಸವಲತ್ತುಗಳು ಇಲ್ಲದೆ ದುಸ್ಥಿತಿಯಲ್ಲಿರುವುದು ದುರ್ದೈವ.
ನಗರದ ಚಾಮುಂಡಿಪುರಂ ನಲ್ಲಿರುವ ದಯಾನಂದ ಸಾಗರ ಮಗ್ಗೆ ವೆಂಕಟಯ್ಯ ಅವರ ಕನಸಿನ ಶಾಲೆಯಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ- ವಿಎಂವಿ ಬಾಲಬೋಧಿನಿ ಶಾಲೆಯ ಕಟ್ಟಡವು ಶಿಥಿಲಗೊಂಡು ಮಳೆಗೆ ಸೋರುತ್ತಿದೆ.
ಮಹಾತ್ಮ ಗಾಂಧೀಜಿಯವರ ಸಮಾನತೆಯ ಚಿಂತನೆಗಳಿಂದ ಪ್ರೇರಣೆಗೊಂಡ ಮೈಸೂರಿನ ವೃದ್ಧ ಪಿತಾಮಹ ದಯಾನಂದಸಾಗರ ಮಗ್ಗೆ ವೆಂಕಟಕೃಷ್ಣಯ್ಯ ಅವರು ದಲಿತ ಮಕ್ಕಳ ಶೈಕ್ಷಣಿಕ ಹಿತಕ್ಕಾಗಿಯೇ ಶಾಲೆ ಪ್ರಾರಂಭಿಸಲು ತನ್ನ ಸ್ವಂತ ಮನೆಯನ್ನೇ ಬಿಟ್ಟು ಕೊಟ್ಟರು.
೧೮೯೬ರಲ್ಲಿ ಸ್ಥಾಪಿತವಾದ ಈ ಶಾಲೆ ಈಗ ೧೩೦ ವರ್ಷಗಳನ್ನು ದಾಟಿ ಸಾಗುತ್ತಿದೆ.
ಗಾಂಧೀಜಿ ಅವರ ಆಶಯಗಳನ್ನು ಹೊತ್ತುಕೊಂಡು ದಲಿತ ಮಕ್ಕಳಿಗಾಗಿ ಸ್ಥಾಪಿತವಾದ ಶಾಲೆ ಇದು.
ಹಾಗಾಗಿ ಶಾಲೆಯನ್ನು ದಲಿತ ಮಕ್ಕಳ ಶಾಲೆ ಗಾಂಧಿ ಶಾಲೆ ಎಂದು ಕರೆಯುತ್ತಿದ್ದರಂತೆ.
ಈಗ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು, ಮಳೆ ಬಂದಾಗ ಚಾವಣಿ ಸೋರುತ್ತದೆ. ಇದರಿಂದ ಕಟ್ಟಡದ ಗೋಡೆಗಳ ಗಾರೆ ಉದುರುತ್ತಿದೆ.ಶಾಲೆಯ ಕಾಂಪೌಂಡ್ ಬಣ್ಣ ಕಾಣದೆ ಪಾಚಿ ಕಟ್ಟಿಕೊಂಡು ಕೊಳಕಾಗಿ ಕುಸಿದು ಬೀಳುವ ಸ್ಥಿತಿಯಲ್ಲಿದೆ.
ಪ್ರಸ್ತುತ ಈ ಶಾಲೆಯಲ್ಲಿ ೩೫ ಮಕ್ಕಳು ಕಲಿಯುತ್ತಿದ್ದಾರೆ. ನಾಲ್ವರು ಶಿಕ್ಷಕಿಯರು ಇದ್ದಾರೆ. ಶಾಲೆಯ ಸಮೀಪದ ಸೆಂಟ್ ಮೇರಿ’ಸ್, ಶಾರದಾ ವಿಲಾಸ ಶಾಲೆ, ವಾಣಿ ವಿದ್ಯಾಮಂದಿರ ಹಾಗೂ ಇನ್ನಿತರ ಖಾಸಗಿ ಶಾಲೆಗಳಿಗೆ ಹೆಚ್ಚು ಪ್ರವೇಶಾತಿ ಇದೆ.ಹಾಗಾಗಿ ಈ ಶತಮಾನದ ಶಾಲೆಗೆ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ.
ಇದಕ್ಕೆ ಸವಾಲು ಹಾಕುವಂತೆ ಬಾಲಬೋಧಿನಿಯ ಪ್ರಭಾರ ಮುಖ್ಯಶಿಕ್ಷಿಕರಾದ ಲತಾಕುಮಾರಿ, ಸಹ ಶಿಕ್ಷಕಿಯರಾದ ಬಿ.ಎಸ್.ಲೀಲಾವತಿ, ಆರ್.ಎಂ.ಮೋಸಿನ್ ತಾಜ್, ಮಮತಾ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ವಾಹನ ವ್ಯವಸ್ಥೆ ಮಾಡಿದ್ದಾರೆ.
ಈ ವ್ಯವಸ್ಥೆಗೆ ಒಂದು ವರ್ಷಕ್ಕೆ ೧ ಲಕ್ಷ ರೂ. ಖರ್ಚಾಗುತ್ತದೆ ಎನ್ನುತ್ತಾರೆ ಲತಾಕುಮಾರಿ.ಈ ಶಾಲೆಗೆ ಜೆ.ಪಿ.ನಗರ, ನಾಚನಹಳ್ಳಿ ಪಾಳ್ಯ, ಮಂಡಕಳ್ಳಿ ಹಾಗೂ ಮಹಾದೇವಪುರದ ನರ್ಮ್ ಯೋಜನೆಯ ಮನೆಗಳ ಮಕ್ಕಳು ಬರುತ್ತಾರೆ.
ಬಹುಪಾಲು ಪೌರಕಾರ್ಮಿಕರು, ಕೂಲಿ ಕಾರ್ಮಿಕರ ಕುಟುಂಬದ ಮಕ್ಕಳೇ ಇದ್ದಾರೆ. ಇವರಲ್ಲಿ ೨೧ ಪರಿಶಿಷ್ಟ ಜಾತಿ ಮಕ್ಕಳು, ೧ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿ, ೧೦ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದ ಮಕ್ಕಳು, ೩ ಮುಸ್ಲಿಂ ಮಕ್ಕಳು ಕಲಿ ಯುತ್ತಿದ್ದಾರೆ.
ಮೈಸೂರಿನ ಮಲ್ಲಿಗೆ ಸೇವಾ ಸಂಘವು ಈ ಶತಮಾದ ದಾಟಿದ ಶಾಲೆಗೆ ಒತ್ತಾಸೆಯಾಗಿ ನಿಂತಿದೆ.
ಆದರೂ ಈ ಶಾಲೆಯ ಕಟ್ಟಡಕ್ಕೆ ಬಣ್ಣ ಹಾಕಿಸಲು ಹಾಗೂ ಶುದ್ಧ ಕುಡಿಯುವ ನೀರಿಗಾಗಿ ಆರ್ಒ ಪ್ಲಾಂಟ್ ಅಗತ್ಯವಿದೆ ಆದ್ದರಿಂದ ಯಾರಾದರೂ ದಾನಿಗಳು ನೆರವಾಗಬೇಕೆಂಬುದು ಲತಾಕುಮಾರಿ ಅವರ ಆಶಯವಾಗಿದೆ.
ಶ್ರೀಮಂತರು ಯಾರಾದರೂ ಈ ಶಾಲೆಯ ಜೀರ್ಣೊದ್ದಾರಕ್ಕೆ ಮುಂದಾಗಬೇಕಿದೆ.
