ಬೆಂಗಳೂರು: ಕಳೆದೆರಡು ದಿವಸಗಳಿಂದ ಬೆಂಗಳೂರಿನ ಮಿಶ್ರ ತ್ಯಾಜ್ಯಗಳ ಸಂಗ್ರಹಣ ಲಾರಿಗಳನ್ನು ಮಹದೇವಪುರ ಮತ್ತು ಬ್ಯಾಟರಾಯನಪುರ ಕ್ಷೇತ್ರಗಳ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ತಡೆಹಿಡಿದಿರುವುದು ಸರಿಯಲ್ಲ ಎಂದು ಆಮ್ ಆದ್ಮಿ ಪಕ್ಷ ಅಸಮಾಧಾನ ವ್ಯಕ್ತಪಡಿಸಿದೆ.
ಕೀಳು ಮಟ್ಟದ ರಾಜಕೀಯಕ್ಕಾಗಿ ಬೆಂಗಳೂರನ್ನು ಬಲಿ ಕೊಡುತ್ತಿರುವುದು ಯಾವುದೇ ನಾಗರಿಕ ಸಮಾಜ ಒಪ್ಪಲು ಸಾಧ್ಯವಿಲ್ಲ ಎಂದು ಪಕ್ಷದ ಮುಖಂಡ ಅಶೋಕ್ ಮೃತ್ಯುಂಜಯ ತಮ್ಮ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಶಾಸಕರು ಈಗ ಕಸ ವಿಲೇವಾರಿಯ ವೈಜ್ಞಾನಿಕತೆಯ ಬಗ್ಗೆ ಮಾತನಾಡುತ್ತಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ಯಾವುದೇ ಆಧುನಿಕ ಕ್ರಮಗಳನ್ನು ತೆಗೆದುಕೊಳ್ಳದೆ ಕೇವಲ ತಮ್ಮ ಅನುದಾನದ ಕಮಿಷನ್ ಆಸೆಗಾಗಿ ಇಂತಹ ಮಟ್ಟಕ್ಕೆ ಇಳಿದಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಇತ್ತ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಬಿಜೆಪಿ ಕಚೇರಿಯ ಮುಂದೆ ಕಸ ಸುರಿಯುತ್ತೇವೆಂಬ ಉದ್ದಟತನದ ಹೇಳಿಕೆ ನೀಡಿದ್ದಾರೆ,ಇದೇ ರೀತಿಯ ವರ್ತನೆ ಮುಂದುವರಿದಲ್ಲಿ ಬೆಂಗಳೂರಿನ ನಾಗರೀಕರೆಲ್ಲರೂ ಸೇರಿ ಈ ಎರಡೂ ಪಕ್ಷಗಳ ಕಚೇರಿಗಳ ಮುಂದೆ ಕಸ ಸುರಿಯುವ ಕಾಲವೇನು ದೂರವಿಲ್ಲ ಆಮ್ ಆದ್ಮಿ ಪಕ್ಷವು ನಾಗರಿಕರ ಹೋರಾಟದೊಂದಿಗೆ ಕೈಜೋಡಿಸಬೇಕಾಗುತ್ತದೆ ಎಂದು ಅಶೋಕ್ ಮೃತ್ಯುಂಜಯ ಎಚ್ಚರಿಸಿದ್ದಾರೆ.
