ಮೈಸೂರು: ನಗರದಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ನಿವೇಶನಗಳನ್ನು ತೆರವುಗೊಳಿಸಿ ದೊಡ್ಡಕೆರೆ ಮತ್ತು ಲಿಂಗಾಂಬುಧಿ ಕೆರೆ ಪುನರುಜ್ಜೀವನ ಗೊಳಿಸಬೇಕೆಂದು ದಾವಣಗೆರೆಯ ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್ ದೇವರಮನಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ, ನಿವೇಶನಗಳ ಹೆಸರಿನಲ್ಲಿ ಈವರೆಗೆ ಮೈಸೂರು ಸೇರಿದಂತೆ ರಾಜ್ಯದಲ್ಲಿ ಹಲವಾರು ಕೆರೆಕಟ್ಟೆಗಳನ್ನು ಮುಚ್ಚಲಾಗಿದೆ,ಇದರಿಂದ ಜಲಮೂಲಗಳಿಗೆ ಕಂಟಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದೀಗ ನಗರದ ಕುರುಬಾರಹಳ್ಳಿ ಗ್ರಾಮದ ಸರ್ವೇ ನಂ.4ರಲ್ಲಿ ಎಂಡಿಎ ವತಿಯಿಂದ ನಿವೇಶನಗಳನ್ನು ನಿರ್ಮಿಸಲಾಗಿದೆ. ಇದರಿಂದ ಪ್ರಕೃತಿ ಮತ್ತು ಜಲಮೂಲಗಳಿಗೆ ಹಾನಿಯಾಗಿದೆ, ಭೂಗರ್ಭದಲ್ಲಿ ಜಲ ಮಣ್ಣು ಕುಸಿಯುವ ಅಪಾಯವಿದೆ. ಕೂಡಲೇ ಎಂಡಿಎ ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತು ಪರಿಸರ ಸಮತೋಲನ ಕಾಪಾಡಲು ಹಾಗೂ ಜಲಮೂಲಗಳನ್ನು ಸಂರಕ್ಷಿಸಲು ನಿವೇಶಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಸರ್ವೇ ನಂ.4ರ ಜಲಮೂಲ ಪ್ರದೇಶದ ನಿವೇಶನಗಳನ್ನು ರದ್ದುಪಡಿಸಿ, ತೆರವು ಮಾಡಬೇಕು. ಹಾಳಾಗಿರುವ ಕೆರೆ, ಕಟ್ಟೆಗಳನ್ನು ಪುನರ್ಸ್ಥಾಪಿಸಿ ಸಂರಕ್ಷಿಸಬೇಕು. ನಗರದ ದೊಡ್ಡಕೆರೆಯನ್ನು ಮೂಲ ಸ್ಥಿತಿಗೆ ತಂದು ಪುನರುಜ್ಜೀವನಗೊಳಿಸಬೇಕು ಎಂದು ಆಗ್ರಹಿಸಿದರು.
ಪರಿಸರ ಹಾನಿಗೆ ಕಾರಣವಾದ ಯೋಜನೆಗಳನ್ನು ಮರುಪರಿಶೀಲಿಸಿ, ನಗರದ ಮಾಲ್ ಆಫ್ ಮೈಸೂರ್ಗೆ ನೀಡಿದ ಅನುಮೋದನೆಯನ್ನು ರದ್ದುಗೊಳಿಸಬೇಕು. ಲಿಂಗಾಂಬುಧಿ ಕೆರೆಯನ್ನು ಸಂಪೂರ್ಣವಾಗಿ ಪುನರ್ ಸ್ಥಾಪಿಸಿ ಅದರ ಆವರಣದ ಸುತ್ತಲಿನ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಬೇಕು ಎಂದು ಹೇಳಿದರು.
ಇನ್ನು 15 ದಿನದಲ್ಲಿ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ, ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುತ್ತದೆ ಎಂದು
ಗಿರೀಶ್ ದೇವರಮನಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಮಾಲತೇಶ್, ವಿಜಯ್ಕುಮಾರ್, ಎಂ.ಶಿವಕುಮಾರ್ ಉಪಸ್ಥಿತರಿದ್ದರು.
