ಮೈಸೂರು: ಅರಣ್ಯಗಳಲ್ಲಿ ಸಫಾರಿ ಆರಂಭಕ್ಕೆ ಸರ್ಕಾರ ಅನುಮತಿ ನೀಡಿರುವುದು ಖಂಡನೀಯ,ಈ ನಿರ್ಧಾರ ವಾಪಸ್ ಪಡೆಯದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅರಣ್ಯದ ಅಂಚಿನಲ್ಲಿ ವಾಸ ಮಾಡುವ ಗ್ರಾಮಗಳ ರೈತರ ಕಷ್ಟ ಅರಿಯದೆ ಕಾಡು ಪ್ರಾಣಿಗಳು ಜನರ ಪ್ರಾಣ ಹಾನಿ ಮಾಡುತ್ತಿದ್ದರೂ ಲೆಕ್ಕಿಸದೆ ಬಂಡವಾಳ ಶಾಹಿ ರೆಸಾರ್ಟ್ ಮಾಲೀಕರ ಒತ್ತಡಕ್ಕೆ ಮಣಿದು ಸಫಾರಿ ಆರಂಭಕ್ಕೆ ಅನುಮತಿ ನೀಡಿರುವುದು ಖಂಡನಿಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ನಿರ್ಧಾರ ವಾಪಾಸ್ ಪಡಬೇಕು ಇಲ್ಲದಿದ್ದರೆ ರೈತ ಸಂಘಟನೆಗಳು ಬೀದಿಗೆ ಇಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಡಿನಲ್ಲಿ ನಡೆಯುವ ಸಫಾರಿಯಿಂದ ಪ್ರಾಣಿಗಳು ಭೀತಿಯಿಂದ ನಾಡಿಗೆ ಬರುತ್ತಿವೆ, ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ, ರೈತರ ಬೆಳೆ ನಾಶ ಮಾಡುತ್ತಿವೆ.ಇದೆಲ್ಲಾ ತಿಳಿದಿದ್ದರೂ ಸರ್ಕಾರ ಯಾರದ್ದೊ ಒತ್ತಡಕ್ಕೆ ಮಣಿದು ಸಫಾರಿಗೆ ಅನುಮತಿ ನೀಡಿದೆ ಎಂದು ಆರೋಪಿಸಿದರು.
ಪ್ರಾಣಿಗಳ ಸಂಖ್ಯೆ ಏರಿಕೆಯಾಗಿದೆ ಕಾಡು ಪ್ರದೇಶ ಕಡಿಮೆಯಾಗಿದೆ ಎಂಬುದಾಗಿ ಸರ್ಕಾರವೇ ಹೇಳುತ್ತಿದೆ, ಸರ್ಕಾರಕ್ಕೆ ಬರುವ ಆದಾಯ ಮುಖ್ಯವಾಗಬಾರದು, ಜನರ ಬದುಕು ಮುಖ್ಯವಾಗಿರಬೇಕು ಎಂಬುದನ್ನು ಸರ್ಕಾರ ಅರಿಯಬೇಕು, ಅರಣ್ಯ ಸಚಿವರು ಯಾವುದೇ ಒತ್ತಡಕ್ಕೆ ಮಣಿಯದೆ ನಿರ್ಧಾರ ವಾಪಾಸ್ ಪಡೆಯಬೇಕು ಎಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
