ಬೆಂಗಳೂರು: ಭಾರತ-ಅಮೆರಿಕ ವಾಣಿಜ್ಯ ಒಪ್ಪಂದ ರೈತರಿಗೆ ನೀಡಿರುವ ಮರಣ ಶಾಸನವಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತೀವ್ರ ವಾಗ್ದಾಳಿ ನಡೆಸಿದರು.
ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತ ದೇಶವು ಪರಂಪರಾನುಗತವಾಗಿ ಕೃಷಿ ಕ್ಷೇತ್ರವನ್ನು ತನ್ನ ಆರ್ಥಿಕತೆಯ ಬೆನ್ನೆಲುಬಾಗಿ ಕಾಪಾಡಿಕೊಂಡು ಬಂದಿದೆ.ಕೋಟ್ಯಾಂತರ ಸಂಖ್ಯೆಯ ಸಣ್ಣ ರೈತರು ಇಂದಿಗೂ ಭಾರತದ ಆರ್ಥಿಕತೆಗೆ ಬೆನ್ನೆಲುಬಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅಮೆರಿಕ ದೇಶದ ಒತ್ತಡ ಹಾಗೂ ಹಿತಾಸಕ್ತಿಗೆ ಬಲಿಯಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಎರಡು ದೇಶಗಳ ನಡುವಿನ ವ್ಯಾಪಾರ ಒಪ್ಪಂದವನ್ನು ಐತಿಹಾಸಿಕವೆಂದು ಹೇಳುತ್ತಲೇ ಭಾರತೀಯ ರೈತರುಗಳಿಗೆ ಮರಣ ಶಾಸನವನ್ನೇ ಬರೆದುಬಿಟ್ಟಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಭಾರತದ 145 ಕೋಟಿ ಜನಸಂಖ್ಯೆಯಲ್ಲಿ 85 ರಿಂದ 90 ಕೋಟಿ ಜನತೆ ಕೃಷಿ ಚಟುವಟಿಕೆಗಳು ಹಾಗೂ ಕೃಷಿ ಸಂಬಂಧಿತ ಉದ್ಯೋಗಗಳಲ್ಲಿ ತೊಡಗಿದ್ದಾರೆ. ನಮ್ಮ ರೈತರು ಯಾವುದೇ ಯಾಂತ್ರಿಕೃತ ವ್ಯವಸ್ಥೆಗಳಿಲ್ಲದೆ ಕೃಷಿ ಬದುಕಿನಲ್ಲಿ ತೊಡಗಿದ್ದಾರೆ. ಆದರೆ ಅಮೆರಿಕಾ ದೇಶವು ಸಂಪೂರ್ಣ ಯಾಂತ್ರಿಕೃತ ವ್ಯವಸ್ಥೆಗಳಿಂದ ಲಕ್ಷಾಂತರ ಎಕರೆ ಭೂಪ್ರದೇಶಗಳಲ್ಲಿ ಲಕ್ಷಾಂತರ ಬೆಳೆಗಳನ್ನು ಬೆಳೆಯುತ್ತಾರೆ. ಭಾರತದ ರೈತರು ಬೆಳೆಯುವ ಬೇಳೆಕಾಳು, ಧಾನ್ಯಗಳು, ಕೆಂಪು ಜೋಳ, ದ್ವಿಧಳ ಧಾನ್ಯಗಳು, ಸೋಯಾ, ಹಣ್ಣು ಮತ್ತು ತರಕಾರಿಗಳು ಸೇರಿದಂತೆ ಅನೇಕ ಬೆಳೆಗಳನ್ನು ಇದುವರೆಗೂ ವಿದೇಶಗಳಿಗೆ ರಫ್ತು ಮಾಡುವ ಮೂಲಕ ಉತ್ತಮವಾದ ಬೆಲೆಗಳನ್ನು ನಿರೀಕ್ಷಿಸಬಹುದಾಗಿತ್ತು.
ಆದರೆ ಮೋದಿ ಹಾಗೂ ಟ್ರಂಪ್ ನಡುವಿನ ಈ ವ್ಯಾಪಾರ ಒಪ್ಪಂದದಲ್ಲಿ ಯಾಂತ್ರಿಕೃತ ವ್ಯವಸ್ಥೆಯಿಂದ ಬೆಳೆದಿರುವ ಅಮೆರಿಕಾ ದೇಶದ ಲಕ್ಷಾಂತರ ಕೃಷಿ ಬೆಳೆಗಳನ್ನು ಭಾರತವು ಶೂನ್ಯ ಅಥವಾ ಕಡಿಮೆ ಸುಂಕದ ರೂಪದಲ್ಲಿ ಮಾರುಕಟ್ಟೆ ಸೃಷ್ಟಿಸಲು ಹೊರಟಿರುವುದು ನಿಜಕ್ಕೂ ರೈತರು ಕಂಗಾಲಾಗುವ ಸಂಗತಿ ಎಂದು ತಿಳಿಸಿದರು.
ಭಾರತದ ಬಡ ರೈತರು ಬೆಳೆಯುತ್ತಿರುವ ಕೃಷಿ ಬೆಳೆಗಳನ್ನು ಅಮೆರಿಕ ದೇಶಕ್ಕೆ ರಫ್ತು ಮಾಡಬೇಕಿದ್ದಲ್ಲಿ ಶೇ 18 ರಷ್ಟು ಸುಂಕ ವೆಚ್ಚ ತೆರಬೇಕಿದೆ. ಇದು ಭಾರತೀಯ ರೈತರಿಗೆ ಮೋದಿಯವರು ನೀಡುತ್ತಿರುವ ಗಲ್ಲು ಶಿಕ್ಷೆ . ಪ್ರಧಾನಿ ನರೇಂದ್ರ ಮೋದಿಯವರು ಯಾವುದೋ ಒತ್ತಡಕ್ಕೆ, ಬಾಹ್ಯ ಹಿತಾಸಕ್ತಿಗೆ ಮಣಿದು ದೇಶದ ರೈತರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರು ಕಟುವಾಗಿ ನುಡಿದರು.
ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ ಗುಂಡಪ್ಪ ಮಾತನಾಡಿ ಅಮೆರಿಕಾ ದೇಶವು ತನ್ನ ಯಾಂತ್ರಿಕೃತ ಕೃಷಿ ವ್ಯವಸ್ಥೆಯಿಂದ ಬೆಳೆದಿರುವ ಕೃಷಿ ಬೆಳೆಗಳು ತೀರ ಅಗ್ಗ ವಾಗಿರುತ್ತವೆ ಇವುಗಳನ್ನು ನಮ್ಮ ಭಾರತೀಯ ಮಾರುಕಟ್ಟೆಗಳಿಗೆ ಪರಿಚಯಿಸಿದಾಗ ನಮ್ಮ ರೈತರು ಬೆಳೆದಿರುವ ಬೆಳೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ಸಹ ಸಿಗುವುದಿಲ್ಲ. ಮಧ್ಯ ತಯಾರಿಕ ಕಾರ್ಖಾನೆಗಳಿಂದ ಬರುವ ಉಳಿದ ಉತ್ಪನ್ನಗಳನ್ನು ಇದುವರೆಗೂ ಕೋಳಿ, ಕುರಿ, ಮೇಕೆ ಹಸು ಇನ್ನಿತರ ಪ್ರಾಣಿಗಳಿಗೆ ಆಹಾರ ರೂಪದಲ್ಲಿ ನೀಡಲಾಗುತ್ತಿತ್ತು. ಇವುಗಳನ್ನು ಸಹ ಅಮೆರಿಕ ದೇಶದಿಂದ ಆಮದು ಮಾಡಿಕೊಳ್ಳುವುದರಿಂದ ನಮ್ಮ ಕೃಷಿ ವಲಯದ ಆರ್ಥಿಕತೆಗೆ ಸಂಪೂರ್ಣ ಪೆಟ್ಟು ಬೀಳುವುದರಲ್ಲಿ ಸಂಶಯವಿಲ್ಲ.ಇದು ಆತಂಕಕಾರಿ ವಿಷಯ ಎಂದು ತಿಳಿಸಿದರು.
ನಮ್ಮ ರೈತರಗಳು ಬೆಳೆಯುವ ಸೋಯಾಬೀನ್ ತೈಲದಿಂದ ಇದುವರೆಗೂ ಭಾರತೀಯ ಕಾರ್ಖಾನೆಗಳ ಉತ್ಪನ್ನ ಗಳಿಗೆ ಬಹುಪಾಲು ಪೂರೈಕೆ ಆಗುತ್ತಿತ್ತು. ಆದರೆ ಅಮೆರಿಕದಿಂದ ಆಮದಾಗುವ ಈ ತೈಲದಿಂದ ಬಹುದೊಡ್ಡ ಹೊಡೆತ ಬೀಳಲಿದೆ ಎಂದು ಸೀತಾರಾಮ ಗುಂಡಪ್ಪ ಆತಂಕ ವ್ಯಕ್ತಪಡಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ.ಸತೀಶ್ ಕುಮಾರ್ ಮಾತನಾಡಿ, ಭಾರತವು ವೈಮಾನಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ,ಡ್ರೋನ್ಸ್ , ರೇರ್ ಅರ್ಥ್ ಮ್ಯಾಗ್ನೆಟಿಕ್, ಸೋಲಾರ್ ನಂತಹ ಅತ್ಯುತ್ತಮ ಉತ್ಪನ್ನಗಳನ್ನು ತಂತ್ರಜ್ಞಾನದ ಸಮೇತ ಆಮದು ಮಾಡಿಕೊಳ್ಳವುದನ್ನು ಬಿಟ್ಟು ಭಾರತೀಯ ರೈತರುಗಳ ಕೃಷಿ ಉತ್ಪನ್ನಗಳನ್ನು ಅಮೆರಿಕ ದೇಶದಿಂದ ಶೂನ್ಯ ಸುಂಕ ವೆಚ್ಚದಲ್ಲಿ ಭಾರತೀಯ ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದು ನಿಜಕ್ಕೂ ಭಾರತೀಯ ರೈತರಿಗೆ ಮಾಡಿರುವ ಮರಣ ಶಾಸನವೇ ಸರಿ ಎಂದು ಹೇಳಿದರು.
ಆಮ್ ಆದ್ಮಿ ಪಕ್ಷವು ರೈತರೊಂದಿಗೆ ಸದಾ ಕಾಲ ಇದ್ದು ಸಂಯುಕ್ತ ಕಿಸಾನ್ ಮೋರ್ಚಾ ರಾಜ್ಯದಲ್ಲಿ ನಡೆಸುವ ಎಲ್ಲ ಪ್ರತಿಭಟನೆಗಳಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಸಹ ಪಕ್ಷದ ಮುಖಂಡರು ಕೇಂದ್ರ ಸರ್ಕಾರದ ಈ ನಡೆಯ ವಿರುದ್ಧ ತೀವ್ರ ಪ್ರತಿಭಟನೆ ಮಾಡಲಿದ್ದಾರೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರುಗಳಾದ ಉಷಾ ಮೋಹನ್,ಅಶೋಕ್ ಮೃತ್ಯುಂಜಯ, ಶಶಿಧರ ಆರಾಧ್ಯ, ಡಾ.ದಿನೇಶ್, ಪುಟ್ಟಣ್ಣ ಗೌಡ, ಪುಷ್ಪ ಕೇಶವ್
ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರುಗಳು ಭಾಗವಹಿಸಿದ್ದರು.
