ಮೈಸೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿರುವ ಹೇಳಿಕೆ ಅತ್ಯಂತ ಬಾಲಿಷ ರಾಜಕೀಯ ಪ್ರೇರಿತ ಮತ್ತು ಹತಾಶೆಯ ಪ್ರತೀಕವಾಗಿದೆ ಎಂದು ಬಿಜೆಪಿ ಮುಖಂಡರಾದ ಡಾ. ಹೇಮಾನಂದೀಶ್ ಕಿಡಿಕಾರಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ವಿಶ್ವದ ಎರಡು ಬಲಿಷ್ಠ ರಾಷ್ಟ್ರಗಳ ನಡುವಿನ ಒಪ್ಪಂದವು ವಿಕಸಿತ ಭಾರತದ ಕನಸನ್ನು ನನಸಾಗಿಸಲು ಮೈಲಿಗಲ್ಲಾಗಿದೆ. ಆದರೆ, ಅಭಿವೃದ್ಧಿಯ ಅರಿವಿಲ್ಲದ ಕಾಂಗ್ರೆಸ್ ನಾಯಕರು ಮತ್ತು ಮುಖ್ಯಮಂತ್ರಿಗಳು ಕೇವಲ ರಾಜಕೀಯ ವಿರೋಧಕ್ಕೆ ದೇಶದ ಹಿತಾಸಕ್ತಿಯನ್ನು ಕಡೆಗಣಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನು ರೈತರ ಮರಣಶಾಸನ ಎಂದು ಕರೆಯುವ ಮೂಲಕ ಸಿಎಂ ರೈತರಲ್ಲಿ ಅನಗತ್ಯ ಭೀತಿ ಹುಟ್ಟಿಸುತ್ತಿದ್ದಾರೆ. ವಾಸ್ತವವಾಗಿ ಈ ಒಪ್ಪಂದದಿಂದ ಭಾರತದ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಮುಕ್ತವಾಗಲಿದೆ ಮತ್ತು ಕೃಷಿ ತಂತ್ರಜ್ಞಾನದ ವರ್ಗಾವಣೆಯಿಂದ ಇಳುವರಿ ಹೆಚ್ಚಲಿದೆ ಎಂದು ಹೇಮಾನಂದೀಶ್ ಹೇಳಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ರೈತರನ್ನು ಕಡೆಗಣಿಸಿದ್ದ ಕಾಂಗ್ರೆಸ್ಗೆ ಈಗ ರೈತರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ತಿಳಿಸಿದ್ದಾರೆ.
ಈ ಒಪ್ಪಂದದಿಂದ ಭಾರತಕ್ಕೆ ಬಂಡವಾಳ ಹರಿದು ಬರಲಿದ್ದು, ಉತ್ಪಾದನಾ ವಲಯದಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ. ತೈಲ ಆಮದಿನ ವೈವಿಧೀಕರಣವು ಭಾರತದ ಇಂಧನ ಭದ್ರತೆಗೆ ಅತ್ಯಗತ್ಯವೇ ಹೊರತು, ಸಿಎಂ ಹೇಳುವಂತೆ ಬೆಲೆ ಏರಿಕೆಗಲ್ಲ. ದೇಶದ ಗೌರವ ಮತ್ತು ಆರ್ಥಿಕ ಹಿತಾಸಕ್ತಿಯನ್ನು ಪ್ರಶ್ನಿಸುವ ಇಂತಹ ಹೇಳಿಕೆಗಳನ್ನು ಹಿಂಪಡೆಯಬೇಕು ಮತ್ತು ಜನತೆಯ ಕ್ಷಮೆಯಾಚಿಸಬೇಕು ಎಂದು ಹೇಮಾ ಆಗ್ರಹಿಸಿದ್ದಾರೆ.
