ಬೆಂಗಳೂರು: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವನ್ನು ಆಮ್ ಆದ್ಮಿ ಪಕ್ಷ ಕಟುವಾಗಿ ವಿರೋಧಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿ ಭಾರತ ದೇಶವು ಪರಂಪರಾನುಗತವಾಗಿ ಕೃಷಿ ಕ್ಷೇತ್ರವನ್ನು ತನ್ನ ಆರ್ಥಿಕ ಬೆನ್ನೆಲುಬಾಗಿ ಕಾಪಾಡಿಕೊಂಡು ಬಂದಿದೆ ಎಂದು ಹೇಳಿದರು.
ಭಾರತೀಯ ರೈತರು ವಿಶ್ವದಲ್ಲಿಯೇ ಕೃಷಿ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ,ಕೋಟ್ಯಾಂತರ ಸಂಖ್ಯೆಯ ಸಣ್ಣ ಸಣ್ಣ ಹಿಡುವಳಿದಾರರು ಇಂದಿಗೂ ಭಾರತದ ಆರ್ಥಿಕತೆಗೆ ಬೆನ್ನೆಲುಬಾಗಿದ್ದಾರೆ, ಹೀಗಿರುವಾಗ ಯಾವುದೋ ಒತ್ತಡ , ಪರಕೀಯರ ಹಿತಾಸಕ್ತಿಗೆ ಬಲಿಯಾಗಿ ಪ್ರಧಾನಿ ನರೇಂದ್ರ ಮೋದಿಯವರು ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವನ್ನು ಐತಿಹಾಸಿಕವೆಂದು ಹೇಳಿ ಭಾರತೀಯ ರೈತರಿಗೆ ಮರಣ ಶಾಸನವನ್ನೇ ಬರೆದುಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತದ 90 ಕೋಟಿ ರೈತ ವರ್ಗಕ್ಕೆ ಈ ಮೂಲಕ ಗಲ್ಲು ಶಿಕ್ಷೆಯನ್ನೇ ನೀಡಿದ್ದಾರೆ ಎಂದರೆ ತಪ್ಪಾಗಲ್ಲ ಎಂದು ಕಟುವಾಗಿ ಟೀಕಿಸಿದರು.
ಭಾರತದ 145 ಕೋಟಿ ಜನಸಂಖ್ಯೆಯಲ್ಲಿ 85ರಿಂದ 90 ಕೋಟಿ ಜನತೆ ಕೃಷಿ ಚಟುವಟಿಕೆಗಳು ಹಾಗೂ ಕೃಷಿ ಸಂಬಂಧಿತ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ. ನಮ್ಮ ರೈತರು ಯಾವುದೇ ಯಾಂತ್ರಿಕೃತ ವ್ಯವಸ್ಥೆಗಳಿಲ್ಲದೆ ಕೃಷಿ ಬದುಕಿನಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಅಮೆರಿಕಾ ದೇಶವು ಸಂಪೂರ್ಣ ಯಾಂತ್ರಿಕೃತ ವ್ಯವಸ್ಥೆಗಳಿಂದ ಲಕ್ಷಾಂತರ ಎಕರೆ ಭೂಪ್ರದೇಶಗಳಲ್ಲಿ ಲಕ್ಷಾಂತರ ಬೆಳೆಗಳನ್ನು ಬೆಳೆಯುತ್ತಾರೆ. ಭಾರತದ ರೈತರು ಬೆಳೆಯುವ ಬೇಳೆಕಾಳುಗಳು, ಧಾನ್ಯಗಳು, ಕೆಂಪು ಜೋಳ, ವಿಧಳ ಧಾನ್ಯಗಳು, ಸೋಯಾ, ಹಣ್ಣು ಮತ್ತು ತರಕಾರಿಗಳು ಸೇರಿದಂತೆ ಅನೇಕ ಬೆಳೆಗಳನ್ನು ಇದುವರೆಗೂ ವಿದೇಶಗಳಿಗೆ ರಫ್ತು ಮಾಡುವ ಮೂಲಕ ಉತ್ತಮವಾದ ಬೆಲೆಗಳನ್ನು ನಿರೀಕ್ಷಿಸಬಹುದಿತ್ತು.ಆದರೆ ಮೋದಿ ಹಾಗೂ ಟ್ರಂಪ್ ನಡುವಿನ ಈ ವ್ಯಾಪಾರ ಒಪ್ಪಂದದಲ್ಲಿ ಯಾಂತ್ರಿಕೃತ ವ್ಯವಸ್ಥೆಯಿಂದ ಬೆಳೆದಿರುವ ಅಮೆರಿಕಾ ದೇಶದ ಲಕ್ಷಾಂತರ ಕೃಷಿ ಬೆಳೆಗಳನ್ನು ಭಾರತವು ಶೂನ್ಯ ಅಥವಾ ಕಡಿಮೆ ಸುಂಕದ ರೂಪದಲ್ಲಿ ಮಾರುಕಟ್ಟೆ ಸೃಷ್ಟಿಸಲು ಹೊರಟಿರುವುದು ನಿಜಕ್ಕೂ ರೈತರನ್ನು ಕಂಗಾಲಾಗಿಸುವ ಸಂಗತಿ ಎಂದು ಆತಂಕವ್ಯಕ್ತಪಡಿಸಿದರು.
ಭಾರತದ ಬಡ ರೈತರು ಬೆಳೆಯುತ್ತಿರುವ ಕೃಷಿ ಬೆಳೆಗಳನ್ನು ಅಮೆರಿಕ ದೇಶಕ್ಕೆ ರಫ್ತು ಮಾಡಬೇಕಿದ್ದಲ್ಲಿ 18 % ಸುಂಕವನ್ನು ತೆರಬೇಕಿದೆ. ಇದು ಭಾರತೀಯ ರೈತರಿಗೆ ಮೋದಿಯವರು ನೀಡುತ್ತಿರುವ ಗಲ್ಲು ಶಿಕ್ಷೆ ಎಂದು ಸೀತಾರಾಮ್ ಗುಂಡಪ್ಪ ವ್ಯಂಗ್ಯವಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಯಾವುದೋ ಒತ್ತಡಕ್ಕೆ, ಬಾಹ್ಯ ಹಿತಾಸಕ್ತಿಗೆ ಮಣಿದು ದೇಶದ ರೈತರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ದೂರಿದರು.
ಅಮೆರಿಕಾ ದೇಶವು ತನ್ನ ಯಾಂತ್ರಿಕೃತ ಕೃಷಿ ವ್ಯವಸ್ಥೆಯಿಂದ ಬೆಳೆದಿರುವ ಕೃಷಿ ಬೆಳೆಗಳು ತೀರ ಅಗ್ಗ ವಾಗಿರುತ್ತವೆ. ಇವುಗಳನ್ನು ನಮ್ಮ ಭಾರತೀಯ ಮಾರುಕಟ್ಟೆಗಳಿಗೆ ಪರಿಚಯಿಸಿದಾಗ ನಮ್ಮ ರೈತರು ಬೆಳೆದಿರುವ ಬೆಳೆಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಸಿಗುವುದಿಲ್ಲ.
ಮಧ್ಯ ತಯಾರಿಕ ಕಾರ್ಖಾನೆಗಳಿಂದ ಬರುವ ಉಳಿದ ಉತ್ಪನ್ನಗಳನ್ನು ಇದುವರೆಗೂ ಕೋಳಿ, ಕುರಿ, ಮೇಕೆ ಹಸು ಇನ್ನಿತರ ಪ್ರಾಣಿಗಳಿಗೆ ಆಹಾರ ರೂಪದಲ್ಲಿ ನೀಡಲಾಗುತ್ತಿತ್ತು. ಇವುಗಳನ್ನು ಸಹ ಅಮೆರಿಕ ದೇಶದಿಂದ ಆಮದು ಮಾಡಿಕೊಳ್ಳುವುದರಿಂದ ನಮ್ಮ ಕೃಷಿ ವಲಯದ ಆರ್ಥಿಕತೆಗೆ ಸಂಪೂರ್ಣ ಪೆಟ್ಟು ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರು ಹೇಳಿದರು.
ನಮ್ಮ ರೈತರು ಬೆಳೆಯುವ ಸೋಯಾಬೀನ್ ತೈಲದಿಂದ ಇದುವರೆಗೂ ಭಾರತೀಯ ಕಾರ್ಖಾನೆಗಳ ಉತ್ಪನ್ನ ಗಳಿಗೆ ಬಹುಪಾಲು ಪೂರೈಕೆ ಆಗುತ್ತಿತ್ತು. ಆದರೆ ಅಮೆರಿಕದಿಂದ ಆಮದಾಗುವ ಈ ತೈಲದಿಂದ ಬಹುದೊಡ್ಡ ಹೊಡೆತ ಬೀಳಲಿದೆ ಎಂದು ಸೀತಾರಾಮ ಗುಂಡಪ್ಪ ಆತಂಕ ವ್ಯಕ್ತಪಡಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ.ಸತೀಶ್ ಕುಮಾರ್ ಮಾತನಾಡಿ,
ಭಾರತವು ವೈಮಾನಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಡ್ರೋನ್ಸ್ , ರೇರ್ ಅರ್ಥ್ ಮ್ಯಾಗ್ನೆಟಿಕ್, ಸೋಲಾರ್ ನಂತಹ ಅತ್ಯುತ್ತಮ ಉತ್ಪನ್ನಗಳನ್ನು ತಂತ್ರಜ್ಞಾನದ ಸಮೇತ ಆಮದು ಮಾಡಿಕೊಳ್ಳವುದನ್ನು ಬಿಟ್ಟು ಭಾರತೀಯ ರೈತರ ಕೃಷಿ ಉತ್ಪನ್ನಗಳನ್ನು ಅಮೆರಿಕ ದೇಶದಿಂದ ಶೂನ್ಯ ಸುಂಕ ವೆಚ್ಚದಲ್ಲಿ ಭಾರತೀಯ ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದು ನಿಜಕ್ಕೂ ಭಾರತೀಯ ರೈತರಿಗೆ ಮಾಡಿರುವ ಮರಣ ಶಾಸನವೇ ಸರಿ ಎಂದು ಆತಂಕ ವ್ಯಕ್ತಪಡಿಸಿದರು.
ಆಮ್ ಆದ್ಮಿ ಪಕ್ಷವು ರೈತರೊಂದಿಗೆ ಸದಾ ಇರುತಗತದೆ, ಸಂಯುಕ್ತ ಕಿಸಾನ್ ಮೋರ್ಚಾ ರಾಜ್ಯದಲ್ಲಿ ನಡೆಸುವ ಎಲ್ಲ ಪ್ರತಿಭಟನೆಗಳಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪಕ್ಷದ ಮುಖಂಡರು ಕೇಂದ್ರ ಸರ್ಕಾರದ ಈ ನಡೆಯ ವಿರುದ್ಧ ತೀವ್ರ ಪ್ರತಿಭಟನೆಯನ್ನು ಮಾಡಲಿದ್ದೇವೆ ಎಂದು ತಿಳಿಸಿದರು.
ಫೆ.16ರಂದು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ವಿನೂತನ ಪ್ರತಿಭಟನೆಯನ್ನು ಹಮ್ಮಿಕೊಂಡು ಕೇಂದ್ರ ಸರ್ಕಾರದ ಕಣ್ತೆರೆಸುತ್ತೇವೆ ಎಂದು ಹೇಳಿದರು.
