ಮೈಸೂರು: ಅನಿವಾರ್ಯ ಕಾರಣಗಳಿಂದ ನನೆಗುದಿಗೆ ಬಿದ್ದಿರುವ ಮೈಸೂರು-ಕುಶಾಲ ನಗರ ಯೋಜನೆಗೆ ಮರು ಚಾಲನೆ ನೀಡಬೇಕು ಎಂದು ಸಂಸದ ಯದುವೀರ್ ಒಡೆಯರ್ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ.
ಪ್ರಮುಖವಾಗಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಲು ಮಧ್ಯ ಪ್ರವೇಶಿಸಬೇಕು ಎಂದು ಪತ್ರ ಬರೆದು ಕೋರಿರುವ ಸಂಸದರು, ಕೆಲವು ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಯೋಜನೆ ನನೆಗುದಿಗೆ ಬಿದ್ದಿದೆ ಎಂದು ಹೇಳಿದ್ದಾರೆ.
ಮೈಸೂರು (ಬೆಳಗೊಳ) – ಕುಶಾಲನಗರ (89 ಕಿಮೀ) ಯೋಜನೆಯ ಅಂತಿಮ ಸ್ಥಳ ಸಮೀಕ್ಷೆ ಪೂರ್ಣಗೊಂಡಿದ್ದರೂ ಕಾರಣಾಂತರಗಳಿಂದ ಸ್ಥಗಿತಗೊಂಡಿದೆ. ಈ ಯೋಜನೆಗೆ ಪುನಶ್ಚೇತನ ನೀಡಬೇಕಿದೆ, ಈ ನಿಟ್ಟಿನಲ್ಲಿ ಸಚಿವರು ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ಯದುವೀರ್ ತಿಳಿಸಿದ್ದಾರೆ.
ಕೊಡಗು ಜಿಲ್ಲೆಗೆ ಸೂಕ್ತ ರೈಲು ಸಂಪರ್ಕವಿಲ್ಲದೇ ಪ್ರಮುಖ ಪ್ರವಾಸೋದ್ಯಮ ಮತ್ತು ತೋಟಗಾರಿಕೆ ಕ್ಷೇತ್ರಗಳ ಆರ್ಥಿಕತೆಗೆ ಭಾರಿ ತೊಂದರೆಯಾಗುತ್ತಿದೆ. ಸಂಪೂರ್ಣವಾಗಿ ಸ್ಯಾಚುರೇಟೆಡ್ ರಸ್ತೆ ಸಂಪರ್ಕದ ಮೇಲೆ ಬೆಳೆಗಾರರು ಅವಲಂಬಿತಾಗಿದ್ದಾರೆ ಎಂದು ವಿವರಿಸಿದ್ದೇನೆ ಎಂದು ಹೇಳಿದ್ದಾರೆ.
ಈ ಯೋಜನೆಯು ಕೊಡಗು ಜಿಲ್ಲೆಗೆ ಸುಸ್ಥಿರ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೇರಳ ಅವಕಾಶ ಒದಗಿಸುತ್ತದೆ. ಕೃಷಿ-ತೋಟಗಾರಿಕೆ ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತದೆ ಮತ್ತು ಕೊಡಗನ್ನು ಮೈಸೂರು ಮತ್ತು ಬೆಂಗಳೂರಿನ ಬೆಳವಣಿಗೆಯ ಕಾರಿಡಾರ್ಗಳೊಂದಿಗೆ ಸಂಯೋಜಿಸುತ್ತದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಯದುವೀರ್ ಒಡೆಯರ್ ತಿಳಿಸಿದ್ದಾರೆ.
ಈ ಎರಡೂ ಮನವಿಯನ್ನು ಸ್ವೀಕರಿಸಿರುವ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಕೂಡಲೇ ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸಂಸದ ಯದುವೀರ್ ಒಡೆಯರ್ ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಕೇಂದ್ರ ಬಜೆಟ್ನಲ್ಲಿ ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಯೋಜನೆ ಘೋಷಿಸಲಾಗಿದೆ. ಆದರೆ ಮೈಸೂರು ಕೈ ಬಿಡಲಾಗಿದೆ. ರೈಲ್ವೆ ಸಚಿವರು ಕೂಡಲೇ ಮಧ್ಯ ಪ್ರವೇಶಿಸಿ ಈ ಯೋಜನೆಗೆ ಸಾಂಸ್ಕೃತಿಕ ನಗರಿಯನ್ನೂ ಸೇರಿಸಬೇಕು ಎಂದು ಸಂಸದರು ಮನವಿ ಮಾಡಿದ್ದಾರೆ.
ಬೆಂಗಳೂರನ್ನು ಮೆಟ್ರೊ ಪಾಲಿಟನ್ ವಲಯದಿಂದ ದಟ್ಟಣೆ ಕಡಿಮೆ ಮಾಡಲು ಇದರು ನೆರವಾಗಲಿದೆ ಮತ್ತು ಹಲವಾರು ದಿನಗಳ ಬೇಡಿಕೆಯನ್ನು ಈಡೇರಿಸಲು ಸಚಿವರು ಮಂದಾಗಬೇಕು,ಈ ನಿಟ್ಟಿನಲ್ಲಿ ಚೆನ್ನೈ-ಬೆಂಗಳೂರು ಆರ್ಥಿಕ ಕಾರಿಡಾರ್ಗೆ ಮೈಸೂರು ಕೂಡ ಸೇರ್ಪಡೆ ಮಾಡಬೇಕೆಂದು ಮನವಿ ಮಾಡಿದ್ದೇನೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ.
