(ವರದಿ: ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಮತ್ತೊಬ್ಬ ಪಾದಯಾತ್ರಿ ಬಾಲಕನ ಮೇಲೆ ಚಿರತೆ ದಾಳಿ ಮಾಡಿದೆ.
ಈ ಘಟನೆ ಮಲೆ ಮಹದೇಶ್ವರ ಬೆಟ್ಟದ 8 ನೇ ಕ್ರಾಸ್ ಬಳಿ ಜರುಗಿದೆ.
ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದ್ದು, ಚಿರತೆ ದಾಳಿಯಿಂದ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಭುವಳ್ಳಿ ಗ್ರಾಮದ ಶ್ರೇಯಸ್(8)ಎಂಬ ಬಾಲಕ ಗಾಯಗೊಂಡಿದ್ದಾನೆ.
ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ ಬಾಲಕ ಶ್ರೇಯಸ್ ಹಾಗೂ ಆತನ ಪೋಷಕರು ಸೇರಿದಂತೆ 20 ಜನರ ತಂಡ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದರು.
ತಾಳುಬೆಟ್ಟದ ಮೂಲಕ ತೆರಳಿ ಪೊನ್ನಾಚಿ ಕ್ರಾಸ್ನಿಂದ ತಲುಪಿ ನಂತರ ಮುಂದೆ ಅರಣ್ಯ ಪ್ರದೇಶದಲ್ಲಿ ಹೋಗುತ್ತಿದ್ದಾಗ 8 ನೇ ಕ್ರಾಸ್ ಬಳಿ ಪಾದಯಾತ್ರಿಕರಿಗೆ ಬೃಹತ್ ಗಾತ್ರದ ಚಿರತೆ ಹಾಗೂ ಒಂದು ಚಿಕ್ಕ ಚಿರತೆ ಕಾಣಿಸಿವೆ.
ಈ ವೇಳೆ ಪಾದಯಾತ್ರಿಕರನ್ನು ಕಂಡ ಚಿರತೆ ದಿಢೀರ್ ದಾಳಿ ನಡೆಸಿದೆ. ಘಟನೆಯಿಂದ ಬಾಲಕ ಗಾಯಗೊಂಡಿದ್ದು,ಕೂಡಲೇ ಬಾಲಕನನ್ನು ಜೊತೆಯಲ್ಲಿದ್ದ ಭಕ್ತರು ಬಸ್ಸಿನ ಮೂಲಕ ಮಲೆ ಮಹದೇಶ್ವರ ಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದ ಬಾಲಕ ಪೋಷಕರೊಡನೆ ಊರಿಗೆ ತರಳಿದ್ದಾನೆ ಎಂದು ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಗದೀಶ್ ಅವರು ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಗದೀಶ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಮಂದಿ ಭಕ್ತಾದಿಗಳು ಪಾದಯಾತ್ರೆ ಮೂಲಕ ತೆರಳುವುದು ವಾಡಿಕೆ. ಅದರಂತೆ ಕಳೆದ ತಿಂಗಳು ಮ.ಬೆಟ್ಟಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಮಂಡ್ಯ ಮೂಲದ ಚಿರನಹಳ್ಳಿ ಗ್ರಾಮದ ಪ್ರವೀಣ್ ಎಂಬವರ ಮೇಲೆ ಚಿರತೆ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ನಂತರ ಅರಣ್ಯ ಇಲಾಖೆ ಕಾರ್ಯಾಚರಣೆಯ ಮೂಲಕ ಚಿರತೆಯನ್ನು ಸೆರೆಹಿಡಿದಿದ್ದರು.
ಘಟನೆಯಿಂದ ಎಚ್ಚೆತ್ತ ಜಿಲ್ಲಾಡಳಿತ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಶಾಸಕ ಎಂ.ಆರ್.ಮಂಜುನಾಥ್ ನೇತೃತ್ವದಲ್ಲಿ ಸಭೆ ನಡೆಸಿ ಮಹಾಶಿವರಾತ್ರಿ ಜಾತ್ರೆ ಪ್ರಯುಕ್ತ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಜನರು ಪಾದಯಾತ್ರೆ ಮೂಲಕ ಮ.ಬೆಟ್ಟಕ್ಕೆ ತೆರಳುತ್ತಾರೆ. ಈ ವೇಳೆ ವನ್ಯ ಪ್ರಾಣಿಗಳಿಂದ ಯಾವುದೇ ಅಪಾಯ ಉಂಟಾಗದಂತೆ ಹಾಗೂ ಬೇಸಿಗೆ ಕಾಲವಾಗಿರುವುದರಿಂದ ಭಕ್ತಾದಿಗಳಿಂದ ಅರಣ್ಯ ಪ್ರದೇಶಕ್ಕೆ ಯಾವುದೇ ಹಾನಿಯಾಗದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ, ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಭಾಸ್ಕರ್ ಅವರಿಗೆ ಇದರ ನೇತೃತ್ವ ವಹಿಸಲಾಗಿದೆ.
ಹಿನ್ನೆಲೆಯಲ್ಲಿ ಫೆಬ್ರವರಿ 7 ರಿಂದ 20 ರವರೆಗೆ 13 ದಿನಗಳ ಕಾಲ ಆಯಕಟ್ಟಿನ ಜಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯನ್ನು ನೇಮಕಮಾಡಲಾಗಿದೆ. ತಾಳಬೆಟ್ಟದಿಂದ ಮ.ಬೆಟ್ಟದವರೆಗೆ 8 ತಂಡಗಳನ್ನು ರಚನೆ ಮಾಡಲು ತೀರ್ಮಾನಿಸಿದ್ದು, ತಾಳಬೆಟ್ಟದಲ್ಲಿ 1 ತಂಡ, ಉಳಿದ 7 ತಂಡಗಳು ಪ್ರತೀ 1 ಕಿ.ಮೀ.ಗೆ ಒಂದು ತಂಡದಂತೆ ಕರ್ತವ್ಯ ನಿರ್ವಹಿಸಲಿವೆ.
ಪ್ರತೀ ತಂಡದ ನೇತೃತ್ವವನ್ನು ವಹಿಸಲು ಅರಣ್ಯ ಇಲಾಖೆಯ ಒಬ್ಬ ಉಪ ವಲಯ ಅರಣ್ಯಾಧಿಕಾರಿ/ಗಸ್ತು ವನಪಾಲಕರನ್ನು ನಿಯೋಜಿಸಿ, ತಂಡದಲ್ಲಿ ಕಳ್ಳಬೇಟೆ ತಡೆ ಶಿಬಿರದ ಒಬ್ಬ ಸಿಬ್ಬಂದಿ, ಪೊಲೀಸ್ ಇಲಾಖೆಯ ಅಥವಾ ಗೃಹರಕ್ಷಕ ದಳದ ಒಬ್ಬ ಸಿಬ್ಬಂದಿ ಮತ್ತು ಪ್ರಾಧಿಕಾರದ ವತಿಯಿಂದ ನೀಡಲಾಗುವ 5 ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ.
ಪ್ರತಿ ತಂಡಕ್ಕೂ ಒಂದು ಬಂದೂಕು, ವಾಕಿಟಾಕಿ, ಟಾರ್ಚ್, ಪಟಾಕಿ, ಮಚ್ಚು, ಲಾಠಿಗಳನ್ನು ನೀಡಲಾಗಿದೆ. ಹೆಚ್ಚುವರಿ ಸಿಬ್ಬಂದಿಯೊಂದಿಗೆ 2 ಕ್ಯಾಂಪರ್ ವಾಹನದಲ್ಲಿ ಉಪ ವಲಯ ಅರಣ್ಯಾಧಿಕಾರಿ/ ಗಸ್ತು ವನಪಾಲಕರ ನೇತೃತ್ವದಲ್ಲಿ ಗಸ್ತು ಸಂಚಾರ ನಡೆಸಬೇಕಿದೆ.
ಮೈಸೂರು ಚಿರತೆ ಕಾರ್ಯ ಪಡೆ ಮತ್ತು ಡ್ರೋನ್ ತಂಡಗಳನ್ನು ನಿಯೋಜಿಸಲು ಕೋರಿದ್ದು, ಅವುಗಳನ್ನು ಸೂಕ್ತ ಸ್ಥಳದಲ್ಲಿ ನಿಯೋಜಿಸಿ ವನ್ಯಪ್ರಾಣಿಗಳ ಚಲನವಲನಗಳ ಬಗ್ಗೆ ನಿಗಾ ವಹಿಸಿ ಗಸ್ತು ತಂಡಗಳಿಗೆ ಮಾಹಿತಿಯನ್ನು ರವಾನಿಸಬೇಕಿದೆ.
ರಾಮಾಪುರ ವಲಯ ಮತ್ತು ಹನೂರು ಬಫರ್ ವಲಯದ ಅರಣ್ಯಾಧಿಕಾರಿಗಳು ತಮ್ಮ ಸಿಬ್ಬಂದಿಯನ್ನು ಹನೂರಿನಿಂದ ತಾಳಬೆಟ್ಟದವರೆಗಿನ ಅರಣ್ಯ ಪ್ರದೇಶದಲ್ಲಿ ನಿಯೋಜಿಸಿ ಕಾಲ್ನಡಿಗೆಯಲ್ಲಿ ತೆರಳುವ ಭಕ್ತಾದಿಗಳಿಗೆ ವನ್ಯಪ್ರಾಣಿಗಳಿಂದ ಯಾವುದೇ ಅಪಾಯ ಸಂಭವಿಸದಂತೆ ಕ್ರಮ ಕೈಗೊಳ್ಳಬೇಕು.
ಭಕ್ತಾದಿಗಳಿಂದ ಅರಣ್ಯಕ್ಕೆ ಬೆಂಕಿ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ವನ್ಯಪ್ರಾಣಿಗಳ ಕುರಿತು ಸೂಚನೆ ನೀಡುವ ನಾಮಫಲಕಗಳನ್ನು ಅಲ್ಲಲ್ಲಿ ಅಳವಡಿಸ ಬೇಕು. ತಾಳಬೆಟ್ಟದಲ್ಲಿ ಧ್ವನಿವರ್ಧಕದ ಮುಖಾಂತರ ಭಕ್ತಾದಿಗಳಿಗೆ ವನ್ಯಪ್ರಾಣಿಗಳ ಬಗ್ಗೆ ಎಚ್ಚರ ವಹಿಸಲು, ಅರಣ್ಯ ಪ್ರದೇಶದಲ್ಲಿ ಗುಂಪುಗುಂಪಾಗಿ ತೆರಳಲು ಹಾಗೂ ಮೂತ್ರ ವಿಸರ್ಜನೆ/ಬಹಿರ್ದೆಸೆ ಇತ್ಯಾದಿಗೆ ಒಬ್ಬೊಬ್ಬರೆ ಅರಣ್ಯದೊಳಗೆ ಹೋಗದಂತೆ ಸೂಚನೆಯನ್ನು ನಿರಂತರವಾಗಿ ನೀಡಲು ವಲಯ ಅರಣ್ಯಾಧಿಕಾರಿಗಳು ಈ ಎಲ್ಲಾ ಕಾರ್ಯಗಳ ಮೇಲುಸ್ತುವಾರಿಯನ್ನು ನಿರ್ವಹಿಸ ಬೇಕು.ಹೀಗೆ ಪಾದಯಾತ್ರಿಗಳ ಸುರಕತೆಗೆ ಅರಣ್ಯ ಇಲಾಖೆಯಿಂದ ಕ್ರಮವಹಿಸಿ ಸಿಬ್ಬಂದಿಗಳನ್ನು ನೇಮಕ ಮಾಡಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೂ ಇಂದು ದುರ್ಘಟನೆ ನಡೆದುಹೋಗಿದೆ.
ಪಾದಯಾತ್ರೆಯ ಮೂಲಕ ತೆರಳುತ್ತಿರುವ ಭಕ್ತಾದಿಗಳು ಅರಣ್ಯ ಪ್ರದೇಶ ಮೂಲಕ ಪಾದಯಾತ್ರೆ ಮಾಡುವ ಬದಲು ಮುಖ್ಯ ರಸ್ತೆಯ ಮೂಲಕ ಪಾದಯಾತ್ರೆ ಮಾಡಿದರೆ ಸುರಕ್ಷತೆ ಇರಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಲಕ್ಷಾಂತರ ಭಕ್ತಾದಿಗಳು ಅರಣ್ಯದಲ್ಲಿ ಪಾದಯಾತ್ರೆ ಮಾಡುತ್ತಾರೆಂಬ ಮಾಹಿತಿ ಇದ್ದರೂ ಇನ್ನು ಸಮರ್ಪಕವಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸದೆ ಇರುವುದರಿಂದ ಮತ್ತೊಮ್ಮೆ ಚಿರತೆ ದಾಳಿ ನಡೆಸಿದೆ ಎಂದು ಪ್ರಜ್ಞಾವಂತ ನಾಗರಿಕರು ಆರೋಪಿಸಿದ್ದಾರೆ.
ಇನ್ನು ಮುಂದಾದರೂ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಗಸ್ತು ಮಾಡುವ ಮೂಲಕ ಭಕ್ತಾದಿಗಳಿಗೆ ಸುರಕ್ಷತೆ ಒದಗಿಸುವಂತೆ ಮನವಿ ಮಾಡಿದ್ದಾರೆ.
