ಕಲಬುರಗಿ: ಬೀದರ್ನಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳಾದ ಮೂವರು ಕೈದಿಗಳು ಕಲಬುರಗಿ ಕೇಂದ್ರ ಕಾರಾಗೃಹದಿಂದ ಎಸ್ಕೇಪ್ ಆಗಿದ್ದಾರೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲೇ ಈ ಘಟನೆ ನಡೆದಿರುವುದು ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸ ಒದಗಿಸಿದೆ.
ಬೀದರ್ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಈ ಮೂವರು ಶಿಕ್ಷೆಗೆ ಒಳಪಟ್ಟಿದ್ದು, ಮಂಗಳವಾರ ಬೆಳಗ್ಗಿನ ಜಾವ 4 ಗಂಟೆಗೆ ಜೈಲಿನ 20 ಅಡಿ ಕಂಪೌಡ್ ಹಾರಿ ಈ ಕೈದಿಗಳು ಪರಾರಿಯಾಗಿದ್ದಾರೆ.
ಬಸವಕಲ್ಯಾಣ ತಾಲ್ಲೂಕಿನ ಇಸ್ಲಾಂಪುರ ಮೂಲದ ಮಸ್ತಾನ್, ಔರಾದ್ ತಾಲ್ಲೂಕಿನ ಸಂತಾಪುರ ಗ್ರಾಮದ ಸಂತೋಷ್ ಮತ್ತು ಬೀದರ್ ತಾಲ್ಲೂಕಿನ ಬಕ್ಕಚೌಡಿ ಗ್ರಾಮದ ಸಾಗರ್ ಪರಾರಿಯಾದ ಕೈದಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೈದಿಗಳು ಪರಾರಿಯಾಗಲು ಜೈಲು ಸಿಬ್ಬಂದಿ ಸಹಕಾರ ನೀಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಮಧ್ಯರಾತ್ರಿ ಲಾಕಪ್ನಲ್ಲಿ ಇರಬೇಕಾದ ಕೈದಿಗಳನ್ನು ಜೈಲು ಸಿಬ್ಬಂದಿ ಯಾಕೆ ಹೊರಗೆ ಬಿಟ್ಟರು ಎಂಬ ಪ್ರಶ್ನೆ ಮೂಡಿದ್ದು ಸಾಕಷ್ಟು ಅನುಮಾನ ಹುಟ್ಟಿಹಾಕಿದೆ.
ಈ ಕುರಿತು ಫರ್ತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೈದಿಗಳ ಪತ್ತೆಗೆ ಹುಡುಕಾಟ ಶುರುವಾಗಿದೆ.
ಈ ಘಟನೆ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು,ಜೈಲು ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಬೇಕೆಂದು ಜನ ಆಗ್ರಹಿಸಿದ್ದಾರೆ.
