ಮೈಸೂರು: ಥ್ರೋಬಾಲ್ನಲ್ಲಿ ದೇಶಕ್ಕೆ ಕೀರ್ತಿ ತಂದಿರುವ ಮೈಸೂರಿನ ಪೃಥ್ವಿ ಶೆಟ್ಟಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಮನವಿ ಮಾಡಿದ್ದಾರೆ
ಮೈಸೂರಿನ ವಾರ್ಡ್ ಸಂಖ್ಯೆ 51 ಅಗ್ರಹಾರದ ರಾಮಾನುಜ ರಸ್ತೆಯಲ್ಲಿ ವಾಸಮಾಡುತ್ತಿರುವ ಪೃಥ್ವಿ ಶೆಟ್ಟಿ ಥ್ರೋಬಾಲ್ ಕ್ರೀಡೆಯಲ್ಲಿ ದೇಶಕ್ಕೆ ಕೀರ್ತಿ ತಂದಿರುವುದು ಸಂತಸ ತಂದಿದೆ ಎಂದು ತೇಜಸ್ವಿ ನಾಗಲಿಂಗಸ್ವಾಮಿ ಶುಭಾಶಯಗಳನ್ನು ತಿಳಿಸಿದ್ದಾರೆ.
ಎಂ. ಪ್ರವೀಣ್ ಶೆಟ್ಟಿ ಹಾಗೂ ಜ್ಯೋತಿ ಶೆಟ್ಟಿ ದಂಪತಿಯ ಮಗಳು ಪೃಥ್ವಿ ಶೆಟ್ಟಿ ಇತ್ತೀಚೆಗೆ ಜಾರ್ಖಂಡ್ನಲ್ಲಿ ನಡೆದ ಎರಡನೇ ದಕ್ಷಿಣ ಏಷ್ಯಾ ಥ್ರೋ ಬಾಲ್ ಚಾಂಪಿಯನ್ಷಿಪ್ನಲ್ಲಿ ಚಾಂಪಿಯನ್ ಪಟ್ಟ ಗೆದ್ದ ಭಾರತ ತಂಡದ ಆಟಗಾರ್ತಿಯಾಗಿದ್ದರೆ.
ಪ್ರವೀಣ್ ಶೆಟ್ಟಿ ಮೈಸೂರಿನಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದು ಅವರು ಕೂಡ ಎಲೆ ಮರೆ ಕಾಯಿಯಂತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮೈಸೂರಿನ ಸೇಂಟ್ ಜೊಸೆಫ್ ಕಾಲೇಜಿನಲ್ಲಿ ಬಿಕಾಂ ಪದವಿ ಮುಗಿಸಿರುವ ಪೃಥ್ವಿ ಚಿಕ್ಕಂದಿನಿಂದಲೂ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಅಲ್ಲದೆ ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲೂ ತೊಡಗಿಸಿಕೊಂಡು ಎರಡು ಬಾರಿ ರಾಜ್ಯಪುರಸ್ಕಾರಕ್ಕೆ ಭಾಜನರಾಗಿದ್ದಾರೆ ಎಂದು ತೇಜಸ್ವಿ ಹೇಳಿದ್ದಾರೆ.
ಪೃಥ್ವಿ ಶೆಟ್ಟಿ ಅವರ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಯನ್ನು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಗಮನಿಸಿ 2026 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಇನ್ನೂ ಹೆಚ್ಚಿನ ಸಾಧನೆ ಮಾಡಲು ಉತ್ತೇಜನ ನೀಡಬೇಕು ಎಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಮನವಿ ಮಾಡಲಿದ್ದಾರೆ.
ಮುಂದಿನ ದಿನಗಳಲ್ಲಿ ನಾವು ಕೂಡ ಕನ್ನಡ ಕ್ರಾಂತಿದಳ ಸಂಘಟನೆಯ ವತಿಯಿಂದ ಪೃಥ್ವಿ ಶೆಟ್ಟಿ ಅವರಿಗೆ ಗೌರವಿಸಿ ಸನ್ಮಾನಿಸುವುದಾಗಿ ಅವರು ತಿಳಿಸಿದ್ದಾರೆ.
