ಮೈಸೂರು: ಸಹಕಾರ ಸಂಘಗಳ ಸದಸ್ಯರ ಪಾಲಿನ ಸಂಜೀವಿನಿ‘ಯಶಸ್ವಿನಿ’ ಆರೋಗ್ಯ ರಕ್ಷಣಾ ಯೋಜನೆಯನ್ನು ೨೬ನೇ ಸಾಲಿಗೂ ಮುಂದುವರಿಸಿ ಹೊಸ ಸದಸ್ಯರ ನೋಂದಣಿಗೆ ಸಹಕಾರ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.
ಅದರಂತೆ ಜನವರಿ ೩ರಿಂದ ಮಾರ್ಚ್ ೩೧ರವರೆಗೆ ನೋಂದಣಿ ಪ್ರಕ್ರಿಯೆ ನಡೆಸುವಂತೆ ಸೂಚಿಸಿದೆ.
೨೦೨೫-೨೬ನೇ ಸಾಲಿನಲ್ಲಿ ೫೦ ಲಕ್ಷ ಸದಸ್ಯರನ್ನು ನೋಂದಾಯಿಸಲು ಗುರಿ ನಿಗದಿಪಡಿಸಿದ್ದು, ಪ್ರತಿ ಜಿಲ್ಲೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಗುರಿ ನಿಗದಿಪಡಿಸಲಾಗಿದೆ.
೨೦೨೪-೨೫ನೇ ಸಾಲಿನಲ್ಲಿ ನೋಂದಾಯಿಸಿದ ಎಲ್ಲ ಸದಸ್ಯರನ್ನೂ ೨೦೨೫-೨೬ನೇ ಸಾಲಿಗೆ ನವೀಕರಿಸಲು ಕ್ರಮವಹಿಸುವಂತೆಯೂ ಸೂಚಿಸ ಲಾಗಿದೆ.
ರಾಜ್ಯದಲ್ಲಿ ಕೆಲವು ಹಾಲು ಉತ್ಪಾದಕರ ಒಕ್ಕೂಟಗಳು, ಡಿಸಿಸಿ ಬ್ಯಾಂಕುಗಳು ಹಾಗೂ ಸಹಕಾರ ಸಂಘ-ಸಂಸ್ಥೆಗಳು ತಮ್ಮ ಸದಸ್ಯರ ವಾರ್ಷಿಕ ಯಶಸ್ವಿನಿ ವಂತಿಕೆಯನ್ನು ಭಾಗಶಃ ಅಥವಾ ಪೂರ್ಣ ವಂತಿಕೆಯನ್ನು ಸಂಘದ ಸ್ವಂತ ಬಂಡವಾಳದಿಂದ ಭರಿಸುತ್ತಿದ್ದು, ಈ ಪದ್ಧತಿಯನ್ನು ರಾಜ್ಯದ ಎಲ್ಲ ಸಹಕಾರ ಸಂಘಗಳೂ ಕೂಡ ಅನುಸರಿಸಿ ಪ್ರೋತ್ಸಾಹಿಸುವಂತೆ ಸಲಹೆ ನೀಡಲಾಗಿದೆ.
೨೦೨೫-೨೬ನೇ ಸಾಲಿನಲ್ಲಿ ಚಿಕಿತ್ಸಾ ಅವಧಿಯನ್ನು ೨೦೨೬ರ ಏಪ್ರಿಲ್ ೧ರಿಂದ ೨೦೨೭ರ ಮಾರ್ಚ್ ೩೧ರವರೆಗೆ ನಿಗದಿಪಡಿಸಲಾಗಿದೆ.
ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ೨೦೦೩ರ ಜೂನ್ ೧ರಂದು ಅಂದಿನ ಎಸ್.ಎಂ.ಕೃಷ್ಣ ಸರ್ಕಾರ ಜಾರಿಗೆ ತಂದಿತ್ತು. ಈ ಯೋಜನೆಯು ರೈತರು, ಮೀನುಗಾರರು, ನೇಕಾರರು ಮತ್ತು ರಾಜ್ಯದ ಸಹಕಾರ ಸಂಘ ಸಂಸ್ಥೆಗಳು ಆಯೋಜಿಸುವ ಸ್ವ ಸಹಾಯ ಗುಂಪುಗಳ ಇತರ ಸದಸ್ಯರನ್ನು ಒಳಗೊಂಡಿದೆ.
ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವಾರ್ಷಿಕ ೫ ಲಕ್ಷ ರೂ. ವೈದ್ಯಕೀಯ ಸೇವೆಯನ್ನು ಒದಗಿಸುತ್ತಾ ಬಂದಿದ್ದು, ಈ ಸಮಗ್ರ ಆರೋಗ್ಯ ಯೋಜನೆಯನ್ನು ಯಶಸ್ವಿನಿ ಸಹಕಾರಿ ರೈತರ ಆರೋಗ್ಯ ರಕ್ಷಣಾ ಟ್ರಸ್ಟ್ ನಿರ್ವಹಿಸುತ್ತಿದೆ.
೨೦೧೮ರಲ್ಲಿ ಸ್ಥಗಿತಗೊಳಿಸಿದ್ದ ಯಶಸ್ವಿನಿ ಯೋಜನೆಯನ್ನು ರಾಜ್ಯದ ಎಲ್ಲ ಸಹಕಾರಿಗಳು ಮತ್ತು ರೈತರ ನಿರಂತರ ಒತ್ತಾಯ ಹಾಗೂ ಬೇಡಿಕೆ ಪರಿಗಣಿಸಿ, ಯೋಜನೆಯ ಮರು ಜಾರಿಗೆ ತೀರ್ಮಾನಿಸಿದ ರಾಜ್ಯ ಸರ್ಕಾರ ೨೦೨೨-೨೩ನೇ ಸಾಲಿನ ಆಯವ್ಯಯದಲ್ಲಿ ಪರಿಷ್ಕೃತ ಯಶಸ್ವಿನಿ ಯೋಜನೆಯನ್ನು ಘೋಷಣೆ ಮಾಡಿದೆ.
ಯೋಜನೆ ಜಾರಿಗಾಗಿ ‘ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್’ ಕೂಡಾ ರಚಿಸಿದ್ದು, ಮುಖ್ಯಮಂತ್ರಿಗಳು ಈ ಟ್ರಸ್ಟ್ನ ಮಹಾ ಪೋಷಕರಾಗಿದ್ದಾರೆ, ಸಹಕಾರ ಸಚಿವರು ಪೋಷಕರಾಗಿ, ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಟ್ರಸ್ಟ್ನ ಅಧ್ಯಕ್ಷರಾಗಿರುತ್ತಾರೆ.
ಸಹಕಾರ ಸಂಘಗಳ ನಿಬಂಧಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು, ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳು, ವಿವಿಧ ವೈದ್ಯಕೀಯ ಕ್ಷೇತ್ರದ ನುರಿತ ವೈದ್ಯಕೀಯ ತಜ್ಞರು ಹಾಗೂ ಇಬ್ಬರು ಹಿರಿಯ ಸಹಕಾರಿಗಳು ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಿಂದ ತಲಾ ಒಬ್ಬರು ಟ್ರಸ್ಟ್ನ ಸದಸ್ಯರಾಗಿರುತ್ತಾರೆ.
ನೋಂದಾಯಿತ ಸದಸ್ಯರಿಗೆ ಯೂನಿಕ್ ಐಡಿ ಸಂಖ್ಯೆಯುಳ್ಳ ಪ್ಲಾಸ್ಟಿಕ್ ಕಾರ್ಡ್ ಒದಗಿಸಲಾಗುತ್ತಿದ್ದು, ಅದನ್ನು ಬಳಸಿ, ಯೋಜನೆಯಡಿ ಗುರುತಿಸಿದ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಅಳವಡಿಸಿಕೊಂಡಿರುವ ೧೬೫೦ ಚಿಕಿತ್ಸೆಗಳು ಮತ್ತು ೪೭೮ ಐಸಿಯು ಸೇರಿ ಒಟ್ಟು ೨೧೨೮ ಚಿಕಿತ್ಸೆಗಳನ್ನು ನಗದು ರಹಿತವಾಗಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಈ ಯೋಜನೆಯಡಿ ಮುಖ್ಯವಾಗಿ ಹೃದಯಕ್ಕೆ ಸಂಬಂಧಿಸಿದ ರೋಗಗಳು, ಕಿವಿ, ಮೂಗು, ಗಂಟಲು ವ್ಯಾಧಿಗಳು, ಕರುಳು ಸಂಬಂಧಿ ಕಾಯಿಲೆಗಳು, ನರಗಳಿಗೆ ಸಂಬಂಧಿಸಿದ ಕಾಯಿಲೆಗಳು, ಕಣ್ಣಿನ ಕಾಯಿಲೆಗಳು, ಮೂಳೆ ರೋಗ, ಸ್ತ್ರೀಯರಿಗೆ ಸಂಬಂಧಿಸಿದ ಕಾಯಿಲೆ ಇತ್ಯಾದಿ ರೋಗಗಳಿಗೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದ ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಒದಗಿಸಲಾಗುತ್ತಿದೆ.
