ಯಳಂದೂರು,ಜುಲೈ.1: ಸಸ್ಯ ಸಂಕುಲ ಹಾಗೂ ಪ್ರಾಣಿ ಸಂಕುಲ ಉಳಿದರೆ ಮಾತ್ರ ಜೀವ ಸಂಕುಲಗಳು ಉಳಿಯಲು ಸಾಧ್ಯ ಎಂದು ಪ್ರೊಫೆಸರ್ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.
ಪಟ್ಟಣದ ಎಸ್ ಡಿ ವಿ ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಾಗೂ ಚಕೋರ ಸಾಹಿತ್ಯ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಣದಲ್ಲಿ ಪರಿಸರ ಪ್ರಜ್ಞೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯರು ಗಿಡಮರಗಳನ್ನು ಪೋಷಿಸಿದಾಗ ಪರಿಸರ ಕಾಳಜಿ ಬೆಳೆಯುತ್ತದೆ, ವಿದ್ಯಾರ್ಥಿ ಜೀವನದಲ್ಲೇ ಪರಿಸರ ಪ್ರಜ್ಞೆಯ ಜೊತೆಗೆ ಜಾಗೃತಿ ಅಗತ್ಯವಾಗಿದೆ ಎಂದು ಹೇಳಿದರು.
ಕೀಟಗಳು ಸುಂದರ ಪ್ರಕೃತಿ ಮಡಿಲಲ್ಲಿ ಬೆಳೆಯುವಾಗ ಸಹಜ ಪ್ರಕ್ರಿಯೆಯೊಂದಿಗೆ ಸಸ್ಯ ಸಂಕುಲದ ಬೆಳವಣಿಗೆಗೆ ತೊಡಕಾಗಿವೆ. ಈ ಕೀಟಗಳನ್ನು ಕೆಲವು ಪಕ್ಷಿಗಳು ನಾಶಪಡಿಸುತ್ತವೆ. ಇದು ಸಸ್ಯಗಳ ಬೆಳವಣಿಗೆಗೆ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸುತ್ತದೆ. ಆದರೆ ಇಂದು ಪಕ್ಷಿಗಳೇ ಕಣ್ಮರೆಯಾಗುತ್ತಿದೆ ಈ ಬಗ್ಗೆ ವಿದ್ಯಾರ್ಥಿಗಳು ಈಗಿನಿಂದಲೇ ಚಿಂತಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಕಾಡಿನಲ್ಲಿ ಸತ್ತ ಪ್ರಾಣಿಗಳನ್ನು ರಣಹದ್ದುಗಳು ತಿಂದು ಪರಿಸರ ವನ್ನು ಸ್ವಚ್ಛಗೊಳಿಸುತ್ತವೆ. ಈ ನಿಟ್ಟಿನಲ್ಲಿ ಪ್ರಾಣಿ ಪಕ್ಷಿ ಸಂಕುಲಗಳ ಉಳಿವಿಗಾಗಿ ಚಿಂತಿಸಬೇಕಾದ ಅಗತ್ಯವಿದೆ. ಪರಿಸರ ಪ್ರಜ್ಞೆ ಎಂದರೆ ಜೀವ ವೈವಿಧ್ಯಮಯವನ್ನು ಕಾಪಾಡಿಕೊಳ್ಳುವುದು ಎಂದು ಪ್ರೊ.ಸಿದ್ದರಾಮಯ್ಯ ತಿಳಿಹೇಳಿದರು.
ಆಫ್ರಿಕಾ ದೇಶದಲ್ಲಿ ಮರಗಳನ್ನು ಕಡಿಯುವ ಸಂದರ್ಭ ಬಂದಾಗ ಅಲ್ಲಿನ ವಿದ್ಯಾರ್ಥಿಗಳು ಮರವನ್ನೇರಿ ಪ್ರತಿಭಟಿಸಿದರು. ಆ ಒಂದು ಪರಿಸರ ಜಾಗೃತಿಯ ಚಿಂತನೆ ನಮ್ಮ ದೇಶದ ಮಕ್ಕಳಲ್ಲಿ ಮೂಡಬೇಕಾಗಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವಿ. ಮಲ್ಲಿಕಾರ್ಜುನಸ್ವಾಮಿ ಅವರು ಮಾತನಾಡಿ, ಒಳ್ಳೆಯ ವಿಚಾರಗಳು ಹಾಗೂ ಸಂವಾದಗಳಲ್ಲಿ ಭಾಗವಹಿಸಬೇಕು. ಪರಿಸರ ಪ್ರೀತಿಸಿದಾಗ ಆರೋಗ್ಯ ಉತ್ತಮವಾಗಿರುತ್ತದೆ. ವಿದ್ಯಾರ್ಥಿ ದೆಸೆಯಲ್ಲಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಂಡಾಗ ವೈಜ್ಞಾನಿಕ ಚಿಂತನೆ ಬೆಳೆಯಲು ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಪರಿಸರ ಕಾಲೇಜಿಗೆ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಹಿರಿಯ ಸಾಹಿತಿ ಕೆ ವೆಂಕಟರಾಜು ಅವರು ಮಾತನಾಡಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಜಿಲ್ಲೆಯಾದ್ಯಂತ 18 ಪರಿಚಯ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಪರಿಸರ ಬಗ್ಗೆ ಆಸಕ್ತಿ ಬೆಳೆಸುವ ಪುಸ್ತಕಗಳನ್ನು ಓದಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಂಚಾಲಕ ಪ್ರಕಾಶ್ ರಾಜ್ ಮೇವು, ಪ್ರೊ, ಶಿವಸ್ವಾಮಿ,ಮುಖ್ಯ ಶಿಕ್ಷಕಿ ದೀಪ, ರಾಜಶೇಖರ್,ಶಿಕ್ಷಕರಾದ ವೀರಭದ್ರಸ್ವಾಮಿ, ಗುಂಬಳ್ಳಿ ಬಸವರಾಜ್, ರಾಜಶೇಖರ್, ಶಿವಮೂರ್ತಿ, ಮಹದೇವ ಹೆಗ್ಗವಾಡಿಪುರ ಮತ್ತಿತರರು ಹಾಜರಿದ್ದರು.
