ಮೈಸೂರು: ರಾಷ್ಟ್ರೀಯ ಅಂಚೆ ನೌಕರರ ದಿನಾಚರಣೆ ಅಂಗವಾಗಿ ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ಸಮಾಜಕ್ಕೆ ಅನನ್ಯ ಸೇವೆ ಸಲ್ಲಿಸುತ್ತಿರುವ ಅಂಚೆ ನೌಕರರನ್ನು ಗುರುತಿಸಿ, ಆತ್ಮೀಯವಾಗಿ ಅಭಿನಂದಿಸಿ ಗೌರವ ಸನ್ಮಾನ ಮಾಡಲಾಯಿತು.
ಈ ವೇಳೆ ಮಾತನಾಡಿದ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ರಾಜಶೇಖರ್, ಅಂಚೆ ಇಲಾಖೆ ದೇಶದ ಅತ್ಯಂತ ಹಳೆಯ ಹಾಗೂ ಜನವಿಶ್ವಾಸ ಗಳಿಸಿರುವ ಸೇವಾ ಸಂಸ್ಥೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
ಆಧುನಿಕ ತಂತ್ರಜ್ಞಾನ, ಮೊಬೈಲ್ ಮತ್ತು ಇಂಟರ್ನೆಟ್ ಯುಗದಲ್ಲಿಯೂ ಅಂಚೆ ನೌಕರರು ತಮ್ಮ ಸೇವಾ ಮನೋಭಾವವನ್ನು ಕಡಿಮೆ ಮಾಡದೆ, ದೇಶದ ಪ್ರತಿಯೊಬ್ಬ ನಾಗರಿಕರ ಮನೆ ಬಾಗಿಲಿಗೆ ಸರ್ಕಾರದ ಹಾಗೂ ಸಾರ್ವಜನಿಕ ಸೇವೆಗಳನ್ನು ತಲುಪಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಹಿಂದಿನ ದಿನಗಳಲ್ಲಿ ಕುಟುಂಬಗಳ ಸುಖ–ದುಃಖದ ಸುದ್ದಿಗಳನ್ನು ಹೊತ್ತ ಪತ್ರಗಳು, ಹಣದ ಆರ್ಡರ್ಗಳು, ಪರೀಕ್ಷಾ ಫಲಿತಾಂಶಗಳು, ನೇಮಕಾತಿ ಆದೇಶಗಳು ಸೇರಿದಂತೆ ಅನೇಕ ಮಹತ್ವದ ದಾಖಲೆಗಳನ್ನು ಜನರ ಕೈಗೆ ತಲುಪಿಸಿದವರು ಅಂಚೆ ನೌಕರರು.
ಇಂದಿಗೂ ಗ್ರಾಮೀಣ ಪ್ರದೇಶಗಳಿಂದ ನಗರಗಳವರೆಗೆ ಅಂಚೆ, ಉಳಿತಾಯ ಯೋಜನೆಗಳು, ಪಿಂಚಣಿ, ಬ್ಯಾಂಕಿಂಗ್ ಸೇವೆಗಳು ಹಾಗೂ ವಿವಿಧ ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಅವರ ಪಾತ್ರ ಅಪಾರವಾಗಿದೆ ಎಂದು ಬಣ್ಣಿಸಿದರು.
ಬಿರು ಬಿಸಿಲು, ಧಾರಾಕಾರ ಮಳೆ, ಚಳಿ ಸೇರಿದಂತೆ ಯಾವುದೇ ಪ್ರತಿಕೂಲ ಪರಿಸ್ಥಿತಿಗಳಿದ್ದರೂ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವ ಅಂಚೆ ನೌಕರರ ಸೇವೆ ನಿಜಕ್ಕೂ ಮಾದರಿಯಾಗಿದೆ.
ಜನರ ಮನೆ ಬಾಗಿಲಿಗೆ ಆಶೆಯ ಸಂದೇಶ, ಸಂತಸದ ಸುದ್ದಿ ಹಾಗೂ ಅಗತ್ಯ ಸೇವೆಗಳನ್ನು ತಲುಪಿಸುವ ಅವರ ಪರಿಶ್ರಮ ಸಮಾಜ ಸದಾ ಸ್ಮರಿಸುವಂತದ್ದು ಎಂದು ರಾಜಶೇಖರ ಹೇಳಿದರು.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಂಚೆ ನೌಕರರ ದಿನಾಚರಣೆಯನ್ನು ಕನ್ನಡಾಂಬೆ ರಕ್ಷಣಾ ವೇದಿಕೆ ಅರ್ಥಪೂರ್ಣವಾಗಿ ಹಾಗೂ ಗೌರವಯುತವಾಗಿ ಆಚರಿಸಿ, ಸಮಾಜ ಸೇವೆಯಲ್ಲಿ ತೊಡಗಿರುವ ಪುಟ್ಟರಾಜು ಕೆ.ಎಂ ( ಪೋಸ್ಟ್ ಮಾಸ್ಟರ್ ಬೆಳವಾಡಿ )ಕುಮಾರ್ ( ಪೋಸ್ಟ್ ಮ್ಯಾನ್ ) ರಮೇಶ್ ಬಿ , ಸರಸ್ವತಿ ಎಸ್ ಬೆಳವಾಡಿ ಪೋಸ್ಟ್ ಆಫೀಸ್. ನೌಕರರಿಗೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಿಕಾ ಸುರೇಶ್ ಅವರ ಮೂಲಕ ಸನ್ಮಾನ ಹಾಗೂ ಗೌರವ ಸಮರ್ಪಿಸಲಾಯಿತು.
ಕನ್ನಡಾಂಬೆ ರಕ್ಷಣಾ ವೇದಿಕೆ ಖಜಾಂಚಿ ನಂಜುಂಡ ಮಾತನಾಡಿ, “ಸಮಾಜದ ಅಭಿವೃದ್ಧಿಯಲ್ಲಿ ಅಂಚೆ ನೌಕರರ ಕೊಡುಗೆ ಅಮೂಲ್ಯವಾಗಿದೆ. ಅವರ ನಿಷ್ಠೆ, ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವ ಪ್ರತಿಯೊಬ್ಬರಿಗೂ ಆದರ್ಶವಾಗಿದ್ದು, ಇಂತಹ ಸೇವಕರನ್ನು ಗೌರವಿಸುವುದು ಪ್ರತಿಯೊಂದು ಸಂಘಟನೆ ಹಾಗೂ ಸಮಾಜದ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ತಾರಾ ಜಿ,
ಮೈಸೂರು ಪ್ರಾಂತ್ಯ ಗೌರವಾಧ್ಯಕ್ಷ ರವಿಗೌಡ , ಮೈಸೂರು ಪ್ರಾಂತ್ಯ ಕಾರ್ಯದರ್ಶಿ ನಾಗರಾಜ್ , ಮೈಸೂರು ಮಹಿಳಾ ಘಟಕದ ಅಧ್ಯಕ್ಷೇ ವತ್ಸಲ , ಪರ್ವೀನ್ ತಾಜ್,ಚನ್ನ ನಾಯಕ, ಜನಾರ್ದನ್, ರವಿ ಗೌಡ ಬೆಳವಾಡಿ,ಮತ್ತು ಪದಾಧಿಕಾರಿಗಳು, ಅಂಚೆ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದು, ಸನ್ಮಾನಿತ ಅಂಚೆ ನೌಕರರಿಗೆ ಅಭಿನಂದನೆ ಸಲ್ಲಿಸಿದರು.
