ಕೊಳ್ಳೇಗಾಲ: ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ವೈದ್ಯರುಗಳ ಹೊಂದಾಣಿಕೆ ಇಲ್ಲದೆ ಉಸಿರು ಕಟ್ಟಿದ ವಾತಾವರಣ ನಿರ್ಮಾಣವಾಗಿದೆ,ಇದರಿಂದ ರೋಗಿಗಳು ಹಾಗೂ ಗರ್ಭಿಣಿಯರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಮಾಧ್ಯಮ ಪ್ರತಿನಿಧಿಗಳು ಸಂಸದರ ಗಮನಕ್ಕೆ ತಂದರು.
ತಾಲ್ಲೂಕಿನ ಮಧುವನಹಳ್ಳಿ ಸಮೀಪ ಮಲೆ ಮಹದೇಶ್ವರ ಬೆಟ್ಟದಿಂದ ಹಿಂದಿರುಗುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದು ಇಬ್ಬರು ಸ್ಥಳದಲ್ಲಿ ಮೃತಪಟ್ಟು 45 ಮಂದಿ ಗಾಯಗೊಂಡ ಹಿನ್ನೆಲೆಯಲ್ಲಿ ಗಾಯಾಳುಗಳ ಯೋಗಕ್ಷಮ ವಿಚಾರಿಸಲೆಂದು ಇಲ್ಲಿನ ಉಪವಿಭಾಗ ಆಸ್ಪತ್ರೆಗೆ ಸಂಸದ ಸುನಿಲ್ ಬೋಸ್ ಭೇಟಿ ನೀಡಿದ್ದರು.
ಆದರೆ ಕೆಲವು ಗಾಯಾಳುಗಳು ಜಿಲ್ಲಾ ಮಟ್ಟದ ವಿವಿಧ ಆಸ್ಪತ್ರೆಗಳಿಗೆ ರವಾನೆ ಯಾಗಿದ್ದು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳು ಸಹ ಬಿಡುಗಡೆ ಹೊಂದಿದ್ದಾರೆ,ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಿಂದ ಅವರು ಮಾಹಿತಿ ಪಡೆದರು.
ಬಳಿಕ ಸಂಸದರು ಸುದ್ದಿಗಾರರ ಜೊತೆ ಮಾತನಾಡಿದರು.
ಈ ವೇಳೆ ಮಾಧ್ಯಮ ಪ್ರತಿನಿಧಿಗಳು ಆಸ್ಪತ್ರೆಯ ನ್ಯೂನ್ಯತೆಯ ಬಗ್ಗೆ ಸಂಸದರ ಗಮನಕ್ಕೆ ತಂದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಪ್ರಸೂತಿ ತಜ್ಞರಿಗೆ ಕರ್ತವ್ಯ ನಿರ್ವಹಿಸಲು ತೊಡಕಾಗಿದ್ದಾರೆ ಅವರಿಗೆ ಮುಕ್ತವಾಗಿ ಕೆಲಸ ಮಾಡಲು ಬಿಡುತ್ತಿಲ್ಲ ಇದರಿಂದಾಗಿ ಆಸ್ಪತ್ರೆಯ ವಾತಾವರಣ ಹದಗೆಡುತ್ತಿದ್ದು ತಾವು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸ ಬೇಕೆಂದು ಸಂಸದರಿಗೆ ಮನವಿ ಮಾಡಿದರು.
ಆಸ್ಪತ್ರೆಯಲ್ಲಿ ಹೆಚ್ಚು ಮಂದಿ ಗರ್ಭಿಣಿಯರು ಸ್ತ್ರೀ ರೋಗ ತಜ್ಞೆ ಡಾ. ಟೀನಾ ಎಂ ಅವರ ಬಳಿ ತಪಾಸನೆಗೊಳಪಟ್ಟು ಚಿಕಿತ್ಸೆ ಪಡೆಯುತ್ತಾರೆ. ಹಾಗೆಯೇ ಪ್ರಸವವೇಳೆ ಕೆಲವು ಗರ್ಭಿಣಿಯರಿಗೆ ಸಾಮಾನ್ಯ ಹೆರಿಗೆಯಾಗದೆ ಸಿಸೇರಿಯನ್ ಮಾಡಿ ಹೆರಿಗೆ ಮಾಡಿಸಬೇಕಾಗುತ್ತದೆ. ಹಾಗಾಗಿ ಡಾ. ಟೀನಾ ಅವರ ಬಳಿ ಹೆಚ್ಚು ಹೆಚ್ಚು ಗರ್ಭಿಣಿಯರು ತಪಾಸಣೆಗೆ ಬರುತ್ತಾರೆ. ಈ ವೇಳೆ ಆಡಳಿತಾಧಿಕಾರಿ ಹಾಗೂ ಅರವಳಿಕೆ ತಜ್ಞರು ಆಗಿರುವ ಡಾ. ಲೋಕೇಶ್ವರಿ ಅವರು ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸುತ್ತಿದ್ದಾರೆ. ಅಲ್ಲದೆ ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ಸಿಸೇರಿಯನ್ ಮಾಡುವ ಯಾವುದೇ ಸೌಲಭ್ಯ ಕಲ್ಪಿಸದೆ ವಿನಾ ಕಾರಣ ತೊಂದರೆ ಕೊಡುತ್ತಿದ್ದಾರೆ ಇವರಿಬ್ಬರ ಜಗಳದಲ್ಲಿ ರೋಗಿಗಳು ಪರದಾಡುವಂತೆ ಆಗಿದೆ ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ಎಂದು ಪತ್ರಕರ್ತರು ಸಂಸದರ ಮುಂದೆ ಆಸ್ಪತ್ರೆಯ ಪ್ರಸ್ತುತ ಸ್ಥಿತಿಯನ್ನು ತೆರೆದಿಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ಇಂತಹ ಪರಿಸ್ಥಿತಿ ಆಸ್ಪತ್ರೆಯಲ್ಲಿ ಯಾವುದೇ ಸಂದರ್ಭದಲ್ಲಿ ಬರಬಾರದು ಎಂದು ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ. ಲೋಕೇಶ್ವರಿ ಅವರಿಗೆ ಎಚ್ಚರಿಕೆ ನೀಡಿದರು.
ಈ ವೇಳೆ ಡಾ. ಲೋಕೇಶ್ವರಿ ಅವರು ಅಂತಹ ಪರಿಸ್ಥಿತಿ ಆಸ್ಪತ್ರೆಯಲ್ಲಿ ಇಲ್ಲ. ಬೇಕಾದರೆ ಸಿಬ್ಬಂದಿಗಳನ್ನು ಕರೆಸುತ್ತೇನೆ ನೀವೇ ಕೇಳಿ ಎಂದು ಸಂಸದರಿಗೆ ಸಮಜಾಯಿಸಿ ನೀಡಿದರು.
ಆಸ್ಪತ್ರೆಯಲ್ಲಿ ಪ್ರಯೋಗಾಲಯವಿದ್ದರೂ ಹೆಚ್ಚಿನ ಪರೀಕ್ಷೆಗಳಿಗೆ ಹೊರಗಡೆ ಬರೆಯುತ್ತಾರೆ ಸ್ಥಳೀಯ ಪ್ರಯೋಗಾಲಯದಲ್ಲಿ ಹೆಚ್. ಬಿ, ಸಿ ಬಿ ಸಿ ಸಣ್ಣಪುಟ್ಟ ಪರೀಕ್ಷೆಗಳನ್ನು ಹೊರತುಪಡಿಸಿ ಥೈರಾಯಿಡ್ ಪರೀಕ್ಷೆ, ಲಿಫಿಡ್ ಪ್ರೊಫೈಲ್ ಪರೀಕ್ಷೆ, ಎಲ್ ಎಫ್ ಟಿ, ಆರ್ ಎಫ್ ಟಿ, ಕ್ರೀಟಿನೆನ್, ಡೆಂಗ್ಯೂ ಸೇರಿದಂತೆ ಉಳಿದ ಹೈ ಪ್ರೊಫೈಲ್ ಪರೀಕ್ಷೆಗಳನ್ನು ಖಾಸಗಿ ಲ್ಯಾಬ್ ಗಳಿಗೆ ಶಿಫಾರಸು ಮಾಡುತ್ತಾರೆ, ಉಪವಿಭಾಗ ಆಸ್ಪತ್ರೆಯಲ್ಲಿ ಜನರಿಗೆ ಉಪಯೋಗವೇ ಇಲ್ಲ ಎಂದು ಈ ಸಂದರ್ಭದಲ್ಲಿ ಸಾರ್ವಜನಿಕರು ದೂರಿದರು.
ಇಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಸುಸಜ್ಜಿತ ವಸತಿಗೃಹದ ಸೌಲಭ್ಯಗಳಿದ್ದರೂ ಯಾವ ವೈದ್ಯರುಗಳು ವಸತಿಗೃಹದಲ್ಲಿ ಉಳಿಯುತ್ತಿಲ್ಲ ದಯವಿಟ್ಟು ವೈದ್ಯರನ್ನು ವಸತಿಗೃಹದಲ್ಲಿ ಉಳಿಯುವಂತೆ ಸೂಚಿಸಿ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಸಿದ ಡಾ.ಲೋಕೇಶ್ವರಿ ಅವರು ಈಗ ಮೂರು ವಸತಿಗೃಹಗಳನ್ನು ನವೀಕರಣ ಮಾಡಿ ಹಸ್ತಾಂತರಿಸಲಾಗಿದೆ. ಆದ್ಯತೆ ಮೇರೆಗೆ ಅವುಗಳನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು
ಆಸ್ಪತ್ರೆಯಲ್ಲಿ ರೇಡಿಯೋಲಜಿಸ್ಟ್ ಇಲ್ಲದೆ ಯಾವುದೇ ಸ್ಕ್ಯಾನಿಂಗ್ ಮಾಡಿಸಲು ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್ ಗಳನ್ನು ಅವಲಂಬಿಸಬೇಕಿದೆ ಆದ್ದರಿಂದ ಇಲ್ಲಿಗೆ ಗುತ್ತಿಗೆ ಆದರದಲ್ಲಾದರೂ ಒಬ್ಬ ರೇಡಿಯೋಲಜಿಷ್ಟ್ ಅನ್ನು ನೇಮಕ ಮಾಡಿಕೊಡಿ ಎಂದು ಇದೇ ವೇಳೆ ಡಾ. ಲೋಕೇಶ್ವರಿ ಸಂಸದರಲ್ಲಿ ಮನವಿ ಮಾಡಿದರು.
ತಾಲೂಕಿನಲ್ಲಿ ಹೃದಯಘಾತದಿಂದ ಸಾವನ್ನಪ್ಪುವರ ಸಂಖ್ಯೆ ಹೆಚ್ಚುತ್ತಿದ್ದು ಇಲ್ಲಿ ಜಯದೇವ ಆಸ್ಪತ್ರೆಯ ಘಟಕವನ್ನು ತೆರೆಯುವಂತೆ ಸಾರ್ವಜನಿಕರು ಇದೇ ವೇಳೆ ಸಂಸದರಲ್ಲಿ ಮನವಿ ಮಾಡಿದರು.
