(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ತಾಲ್ಲೂಕಿನ ಯಡಕುರಿಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು.
ಗ್ರಾಮದ ಹಾಲು ಉತ್ಪಾದಕರ ಸಂಘದ ಮುಂಭಾಗ ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮದ ಹಾಲು ಉತ್ಪಾದಕರು ಸಾಕಷ್ಟು ಸಮಸ್ಯೆಗಳನ್ನು ಚಾಮುಲ್ ಅಧ್ಯಕ್ಷರ ಮುಂದಿಟ್ಟರು.
ಗ್ರಾಮದಲ್ಲಿ ಹಸುಗಳ ಗರ್ಭ ನಿಲ್ಲುತ್ತಿಲ್ಲ ಈ ಹಿಂದೆ ಇದ್ದ ಪಶು ವೈದ್ಯರಾದ ವೃಷಭೇಂದ್ರ ವರ್ಗಾವಣೆಯ ನಂತರ ಇತ್ತೀಚಿಗೆ ಬಂದಿರುವ ವೈದ್ಯರು ಹಸುಗಳಿಗೆ ಸರಿಯಾಗಿ ಗರ್ಭಧಾರಣೆ ಮಾಡುವುದರಲ್ಲಿ ವಿಫಲರಾಗಿದ್ದಾರೆ ಆದ್ದರಿಂದ ಈ ಹಿಂದೆ ಇದ್ದ ವೃಷಭೇಂದ್ರ ಅವರನ್ನೆ ಮತ್ತೆ ಇಲ್ಲಿಗೆ ಹಾಕಿಸಿ ಕೊಡುವಂತೆ ಮನವಿ ಮಾಡಿದರು.
ಹಸುಗಳಿಗೆ ರಿಯಾಯಿತಿ ದರದಲ್ಲಿ ಮ್ಯಾಟ್ ಗಳನ್ನು ಹಾಲು ಒಕ್ಕೂಟದ ವತಿಯಿಂದ ಕೊಡಿಸಿಕೊಡಬೆಕು ಹಾಗೂ ಎಡಕುರಿಯ ಹಾಲು ಉತ್ಪಾದಕರ ಸಹಕಾರ ಸಂಘ ಸ್ವಂತ ಕಟ್ಟಡ ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು.
ಈ ವೇಳೆ ಸಂಘದ ಅಧ್ಯಕ್ಷ ಸುರೇಶ್ ಅವರು ಮಾತನಾಡಿ 2012ರಲ್ಲಿ ಪ್ರಾರಂಭವಾದ ಯಡಕುರಿಯ ಹಾಲು ಉತ್ಪಾದಕರ ಸಂಘಕ್ಕೆ ಈಗ 14 ವರ್ಷವಾಗಿದೆ. ಸಂಘ ಸಮತೋಲನವಾಗಿ ನಡೆದುಕೊಂಡು ಬರುತ್ತಿದೆ ಸಂಘವು 2025 ರ ಏಪ್ರಿಲ್ ನಿಂದ 2026 ರ ಮಾರ್ಚ್ ವರೆಗೆ ಸಿಬ್ಬಂದಿ ಸಂಬಳ ಹಾಗೂ ಕಚೇರಿಯ ಖರ್ಚು ಕಳೆದು 85 ಸಾವಿರ ರೂ ವಾರ್ಷಿಕ ನಿವ್ವಳ ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು.
ಈ ಹಿಂದೆ ಇಲ್ಲಿ ಹಾಲಿನ ಗುಣಮಟ್ಟ ಸ್ವಲ್ಪ ಕಡಿಮೆಯಾಗಿತ್ತು ಆದರೆ ಇತ್ತೀಚೆಗೆ ಗುಣಮಟ್ಟದ ಹಾಲು ಪೂರೈಕೆಯಾಗುತ್ತಿರುವುದರಿಂದ ಲಾಭ ಹೆಚ್ಚಾಗಿ ಬರುತ್ತಿದೆ. ನೀವು ಶೇರುದಾರರಾಗಿ ಹಾಗೂ ಹಾಲು ಉತ್ಪಾದನೆ ಮಾಡಿ ಸಂಘವನ್ನು ಕಟ್ಟಿರುವುದರಿಂದ ಲಾಭ ನಿಮಗೆ ಸಲ್ಲತಕ್ಕದ್ದು. ಅದೇ ಹಾಲು ಉತ್ಪಾದಕರ ಸಹಕಾರ ಸಂಘಗಳು ಒಕ್ಕೂಟಕ್ಕೆ ನೀಡಿದ ಲಾಭ ಈ ಬಾರಿ 3.80 ಕೋಟಿ ರೂ ಲಾಭ ಬಂದಿದೆ.
ಈ ಲಾಭದ ಹಣದಲ್ಲಿ ಈ ಬಾರಿ ಹಾಲು ಉತ್ಪಾದಕರಿಗೆ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಅದರಲ್ಲೂ ಮ್ಯಾಟ್ ಕೊಡಬೇಕು, ಅದರಲ್ಲೂ ಈ ಬಾರಿ 30 ಸಾವಿರ ಮ್ಯಾಟ್ ಕೊಡಬೇಕು ಅಷ್ಟು ಬೇಡಿಕೆ ಇದೆ ಅದಕ್ಕಾಗಿ ಸುಮಾರು ನಾಲ್ಕರಿಂದ ಐದು ಕೋಟಿ ಹಣ ಬೇಕು ಆ ನಿಟ್ಟಿನಲ್ಲಿ ತೀರ್ಮಾನ ಮಾಡಿ ಹಾಲು ಉತ್ಪಾದಕರಿಗೆ ಸೌಲಭ್ಯ ಕಲ್ಪಿಸುವ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ಇದಕ್ಕಾಗಿ ಇದೆ 30 ರಂದು ಟೆಂಡರ್ ಕರೆಯ ಬೇಕಾಗಿದ್ದು ಗುಣಮಟ್ಟದ ಮ್ಯಾಟ್ ಗಳನ್ನು ಪೂರೈಸುವ ಟೆಂಡರ್ ದಾರರು ಸಿಕ್ಕರೆ ಕೂಡಲೇ ಹಾಲು ಉತ್ಪಾದಕರಿಗೆ ರಿಯಾಯಿತಿ ದರದಲ್ಲಿ ಮ್ಯಾಟ್ ಗಳನ್ನು ಒದಗಿಸಿಕೊಡಲಾಗುವುದು. ಮ್ಯಾಟ್ ಗಳನ್ನು ಹಾಲು ಉತ್ಪಾದಕರು ಹಸುಗಳ ಹಾಸಿಗೆ ಮಾತ್ರ ಬಳಸಿಕೊಳ್ಳಿ ದ್ವಿಚಕ್ರ ವಾಹನಗಳ ಸಂರಕ್ಷಣೆಗೆ ಅಥವಾ ಇನ್ನಿತರ ಬೇರೆ ಕೆಲಸಗಳಿಗೆ ಬಳಸಬೇಡಿ ಎಂದು ಸಲಹೆ ನೀಡಿದರು.
ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ಹಾಲು ಮಹಾಮಂಡಲ ಚಾಮರಾಜನಗರ ಹಾಲು ಒಕ್ಕೂಟ ಹಾಗೂ ಧರ್ಮಸ್ಥಳ ಸಂಘದಿಂದ ಪ್ರತ್ಯೇಕವಾಗಿ ಅನುದಾನ ದೊರಕಲಿದ್ದು ಕಟ್ಟಡಕ್ಕೆ ಸೂಕ್ತ ನಿವೇಶನ ನೀಡಿ ನಿವೇಶನವಿಲ್ಲದಿದ್ದರೆ ಸರ್ಕಾರಿ ಜಾಗವಿದ್ದರೆ ತೋರಿಸಿ ಅದನ್ನು ಸರ್ಕಾರದ ಮಟ್ಟದಲ್ಲಿ ಮಂಜೂರಿ ಮಾಡಿಸಿ ಕೊಡುತ್ತೇನೆ ಅಥವಾ ನಿಮ್ಮ ಬಳಿ ಹಣವಿದ್ದರೆ ಖಾಸಗಿ ಅವರಿಂದ ಜಾಗ ಖರೀದಿ ಮಾಡಿ ಎಂದು
ಅಧ್ಯಕ್ಷ ಸುರೇಶ್ ತಿಳಿಸಿದರು.
ಸಭೆಯಲ್ಲಿ ಚಾಮುಲ್ ವಿಸ್ತರಣಾಧಿಕಾರಿಗಳಾದ ಹೆಚ್ ಸಿ ಶ್ರೀನಿವಾಸ್ ಪ್ರಸಾದ್, ಸೋಮಶೇಖರ್, ಸಂಘದ ಮುಖ್ಯ ಕಾರ್ಯನಿರ್ವಾಹಕ ನಟರಾಜು, ಉಪಾಧ್ಯಕ್ಷ ಎಸ್ ಮಹಾದೇವಸ್ವಾಮಿ ನಿರ್ದೇಶಕರುಗಳಾದ ಮಲ್ಲಿಕಾರ್ಜುನ ಕುಮಾರಸ್ವಾಮಿ ಬಸವರಾಜ ಚಿಕ್ಕಬಸಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.
