ಮೈಸೂರು, ಜೂ.2: ರೈತ ಮಹಿಳೆಯರ ಶಕ್ತಿಯ ಸಂಭ್ರಮಾಚರಣೆ ಎಂಬ ವಿಶೇಷ ಘೋಷವಾಕ್ಯದಡಿ ಮೈಸೂರಿನಲ್ಲಿ ವಿಶ್ವ ಹಾಲು ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ನಮ್ಮ ನಂದಿನಿ ನಮ್ಮ ಹೆಮ್ಮೆ,ನಂದಿನಿ ಹಾಲು ಬಳಸಿ ರೈತರ ಹಿತ ಕಾಪಾಡಿ ಎಂಬ ನಾಮಫಲಕಗಳನ್ನು ಹಿಡಿದು ಸಾರೋಟು ಹಾಗೂ ಬೈಕ್ಗಳ ಮೂಲಕ ನಗರದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.
ಆಲನಹಳ್ಳಿ ಬಡಾವಣೆಯಲ್ಲಿರುವ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನಿಯಮಿತ (ಮೈಮುಲ್) ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾ ಮೆರವಣಿಗೆಗೆ ಒಕ್ಕೂಟದ ಆಡಳಿತಾಧಿಕಾರಿ ಸಿ. ಪ್ರಸಾದ್ ರೆಡ್ಡಿ ಹಸಿರು ನಿಶಾನೆ ತೋರಿದರು.
ನಂದಿನಿ ಡೇರಿಯಿಂದ ಹೊರಟ ಮೆರವಣಿಗೆ ಬನ್ನೂರು ಮುಖ್ಯರಸ್ತೆ, ಟೆರಿಶಿಯನ್ ಕಾಲೇಜು ವೃತ್ತ, ನೂತನ ಜಿಲ್ಲಾಧಿಕಾರಿ ಕಚೇರಿ ರಸ್ತೆ, ನಜರಬಾದ್ ಪೊಲೀಸ್ ಠಾಣೆ ಮಾರ್ಗವಾಗಿ ಕುಪ್ಪಣ್ಣ ಪಾರ್ಕ್ ಬಳಿ ಸಂಪನ್ನಗೊಂಡಿತು.
ಏಳು ಸಾರೋಟುಗಳಲ್ಲಿ ನಂದಿನಿ ಉತ್ಪನ್ನಗಳ ಭಿತ್ತಿಪತ್ರಗಳ ಮೂಲಕ ಹಾಲಿನ ಮಹತ್ವ ಸಾರಲಾಯಿತು. ಮೈಮುಲ್ನ ಸಾವಿರಾರು ಸಿಬ್ಬಂದಿ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು ಹಾಲಿನ ಬಳಕೆಯ ಕುರಿತು ಅರಿವು ಮೂಡಿಸಿದರು.
ಈ ವೇಳೆ ಆಡಳಿತಾಧಿಕಾರಿ ಸಿ. ಪ್ರಸಾದ್ ರೆಡ್ಡಿ ಮಾತನಾಡಿ,2001ರಿಂದ ವಿಶ್ವಸಂಸ್ಥೆಯ ಆಶ್ರಯದಲ್ಲಿ ವಿಶ್ವಾದ್ಯಂತ ವಿಶ್ವ ಹಾಲು ದಿನ ಆಚರಿಸಲಾಗುತ್ತಿದೆ. ಆರೋಗ್ಯಕರ ಜೀವನಕ್ಕೆ ಪೌಷ್ಟಿಕಾಂಶ ಅತಿಮುಖ್ಯ. ಸಂಪೂರ್ಣ ಪೌಷ್ಟಿಕಾಂಶ ನೀಡುವ ಹಾಲು ಆರೋಗ್ಯ ವೃದ್ಧಿಗೆ ಹಾಗೂ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ. ಹೀಗಾಗಿ ಹಾಲಿನ ಮಹತ್ವದ ಕುರಿತು ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ ಎಂದು ಹೇಳಿದರು.
ಖಾಸಗಿ ಸಂಸ್ಥೆಗಳ ಹಾಲಿನಲ್ಲಿ ಕಲಬೆರಕೆ ಕಂಡುಬರುತ್ತಿದೆ. ಆದರೆ ನಂದಿನಿ ಹಾಲು ಶೇ.100ರಷ್ಟು ಶುದ್ಧವಾಗಿದೆ. ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದ್ದು, ನಂದಿನಿ ವಿಶ್ವದ ಮೂರನೇ ಅತಿದೊಡ್ಡ ಬ್ರಾಂಡ್ ಆಗಿ ಗುರುತಿಸಿಕೊಂಡಿದೆ. ಈ ವರ್ಷದ ವಿಶ್ವ ಹಾಲು ದಿನವನ್ನು ಮಹಿಳಾ ಸಬಲೀಕರಣ ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಸುರೇಶ್ ನಾಯ್ಕ್ ಮಾತನಾಡಿ ಹಾಲು ಒಂದು ಸಂಪೂರ್ಣ ಆಹಾರ. ದೇಹಕ್ಕೆ ಬೇಕಾದ ಎಲ್ಲ ವಿಟಮಿನ್ಗಳು, ಪೋಷಕಾಂಶಗಳು ಹಾಲಿನಲ್ಲಿವೆ. ರೈತರ ಹಿತಾಸಕ್ತಿ ಕಾಪಾಡಲು ಹಾಲು ಉತ್ಪಾದನೆ ಹೆಚ್ಚಳ ಹಾಗೂ ಬಳಕೆಯ ಬಗ್ಗೆ ಜನಜಾಗೃತಿ ಮೂಡಿಸುವುದು ವಿಶ್ವ ಹಾಲು ದಿನದ ಉದ್ದೇಶ ಎಂದು ತಿಳಿಸಿದರು.
ಮೈಸೂರು ಜಿಲ್ಲೆಯಲ್ಲಿ 5.50 ಲಕ್ಷ ಜಾನುವಾರುಗಳು ಹಾಲು ಉತ್ಪಾದನೆಯಲ್ಲಿ ತೊಡಗಿವೆ. ನಗರ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಹಾಲಿನ ಬೇಡಿಕೆಯೂ ಹೆಚ್ಚಿದೆ. ಆರ್ಸಿಬಿ ಕ್ರಿಕೆಟ್ ತಂಡ ನಮ್ಮ ನಂದಿನಿ ಪ್ರಾಯೋಜಕತ್ವ ಪಡೆದ ಬಳಿಕ ವಿಜಯಶಾಲಿಯಾಗಿರುವುದು ‘ನಮ್ಮ ನಂದಿನಿ ನಮ್ಮ ಹೆಮ್ಮೆ’ ಎಂಬುದನ್ನು ಸಾಬೀತುಪಡಿಸಿದೆ. ಆರ್ಸಿಬಿ ಗೆಲುವಿನ ಹಿಂದೆ ನಂದಿನಿಯ ಶಕ್ತಿಯೂ ಇದೆ ಎಂದು ಹೇಳಿದರು.
ಮೈಮುಲ್ ಆಡಳಿತ ವಿಭಾಗದ ವ್ಯವಸ್ಥಾಪಕಿ ಎಸ್.ಜಿ. ಸೌಮ್ಯ ಮಾತನಾಡಿ ಹೆಚ್ಚು ನಂದಿನಿ ಉತ್ಪನ್ನಗಳನ್ನು ಬಳಸಿದಷ್ಟೂ ರೈತರ ಹಿತ ಕಾಪಾಡಿದಂತೆ. ನಮ್ಮ ಒಕ್ಕೂಟದಲ್ಲಿ 300ಕ್ಕೂ ಹೆಚ್ಚು ಮಹಿಳಾ ಹಾಲು ಉತ್ಪಾದಕ ಸಹಕಾರ ಸಂಘಗಳಿದ್ದು, ಇದು ಮಹಿಳಾ ಸಬಲೀಕರಣಕ್ಕೆ ಉತ್ತಮ ಉದಾಹರಣೆ. ಮೈಸೂರು ಡೇರಿಯಲ್ಲೂ ಅತಿ ಹೆಚ್ಚು ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಮಹಿಳಾ ಸಬಲೀಕರಣ ಆಗಬೇಕು ಎಂದು ಕರೆ ನೀಡಿದರು.
